IPL 2026 Final: ಫೈನಲ್ ಪಂದ್ಯದಲ್ಲಿ ವೇಗದ ಅರ್ಧಶತಕ ಬಾರಿಸಿದ ಕೊಹ್ಲಿ
Virat Kohli Fastest Fifty: ಐಪಿಎಲ್ 2026 ರಲ್ಲಿ ಆರ್ಸಿಬಿ ಸತತ ಎರಡನೇ ಬಾರಿ ಟ್ರೋಫಿ ಗೆದ್ದಿದೆ. ಫೈನಲ್‌ನಲ್ಲಿ ಗುಜರಾತ್ ವಿರುದ್ಧದ ಭರ್ಜರಿ ಗೆಲುವಿಗೆ ವಿರಾಟ್ ಕೊಹ್ಲಿ ಅಜೇಯ 25 ಎಸೆತಗಳಲ್ಲಿ ಬಾರಿಸಿದ ವೇಗದ ಅರ್ಧಶತಕ ಪ್ರಮುಖ ಕಾರಣ. ಇದು ಕೊಹ್ಲಿಯ ಐಪಿಎಲ್ ವೃತ್ತಿಜೀವನದ ಅತಿ ವೇಗದ ಅರ್ಧಶತಕವಾಗಿದ್ದು, ತಮ್ಮ ಹಿಂದಿನ ದಾಖಲೆಯನ್ನು ಮುರಿದು ಇತಿಹಾಸ ಸೃಷ್ಟಿಸಿದ್ದಾರೆ.
ಐಪಿಎಲ್ 2026 ರ ಫೈನಲ್‌ನಲ್ಲಿ ಗುಜರಾತ್ ತಂಡವನ್ನು ಮಣಿಸಿದ ಆರ್ಸಿಬಿ ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದಿದೆ. ತಂಡದ ಈ ಗೆಲುವಿನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಅಜೇಯ ಅರ್ಧಶತಕವೂ ಪ್ರಮುಖ ಪಾತ್ರವಹಿಸಿತು. ಗುಜರಾತ್ ನೀಡಿದ 156 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ಪರ ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತಂಡವನ್ನು ಕೇವಲ 3.3 ಓವರ್ಗಳಲ್ಲಿಯೇ 50 ರನ್ಗಳ ಗಡಿ ದಾಟಿಸಿದರು. ಹಾಗೆಯೇ ಕೇವಲ 25 ಎಸೆತಗಳಲ್ಲಿ ಕೊಹ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಇದು ಕೊಹ್ಲಿ ಅವರ ಐಪಿಎಲ್ ವೃತ್ತಿಜೀವನದ ಅತಿ ವೇಗದ ಅರ್ಧಶತಕವೂ ಆಗಿದೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಈ ಐತಿಹಾಸಿಕ ಅರ್ಧಶತಕ ಸಿಡಿದಿದ್ದು ಸ್ಮರಣೀಯವಾಗಿತ್ತು.
ಈ ಹಿಂದೆ ಕೊಹ್ಲಿ 2018 ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 26 ಎಸೆತಗಳಲ್ಲಿ 50 ರನ್ ಬಾರಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಇದೀಗ 25 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಕೊಹ್ಲಿ ತಮ್ಮ ಹಿಂದಿನ ದಾಖಲೆಯನ್ನು ಮುರಿದರು. ಬರೋಬ್ಬರಿ ಎಂಟು ವರ್ಷಗಳ ನಂತರ ಈ ಸಾಧನೆ ಮಾಡಿದ ಕೊಹ್ಲಿ, ಐಪಿಎಲ್ ಫೈನಲ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಫೈನಲ್‌ನಲ್ಲಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಸುರೇಶ್ ರೈನಾ, ಡೇವಿಡ್ ವಾರ್ನರ್ ಮತ್ತು ವೆಂಕಟೇಶ್ ಅಯ್ಯರ್ ಅವರ ಹೆಸರಿನಲ್ಲಿದೆ. ಈ ಮೂವರು ಕೇವಲ 24 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಜಂಟಿಯಾಗಿ ಎರಡನೇ ಸ್ಥಾನದಲ್ಲಿರುವ ಕೊಹ್ಲಿ ಜೊತೆಗೆ, ರೋಹಿತ್ ಶರ್ಮಾ ಮತ್ತು ಕ್ರಿಸ್ ಗೇಲ್ ಕೂಡ ಫೈನಲ್‌ನಲ್ಲಿ ತಲಾ 25 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದಾರೆ.