ಹೀಗೆ ಔಟಾಗಿ, ಹೀಗೊಂದು ದಾಖಲೆ ಬರೆದ ಸಾಯಿ ಸುದರ್ಶನ್
IPL 2026 RCB vs GT: ಐಪಿಎಲ್ನ ಕ್ವಾಲಿಫೈಯರ್-1 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 254 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡ 19.3 ಓವರ್ಗಳಲ್ಲಿ 162 ರನ್ಗಳಿಗೆ ಆಲೌಟ್ ಆಗಿದ್ದಾರೆ. ಈ ಮೂಲಕ ಆರ್ಸಿಬಿ ತಂಡ 92 ರನ್ಗಳ ಭರ್ಜರಿ ಜಯ ಸಾಧಿಸಿದೆ.
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 20 ಆಟಗಾರರು ಹಿಟ್ ವಿಕೆಟ್ ಆಗಿ ಔಟಾಗಿದ್ದಾರೆ. ಈ ಇಪ್ಪತ್ತು ಆಟಗಾರರಲ್ಲಿ ಎರಡು ಬಾರಿ ಹಿಟ್ ವಿಕೆಟ್ ಆದ ಬ್ಯಾಟರ್ ಸಾಯಿ ಸುದರ್ಶನ್. ಹೀಗೆ ಎರಡು ಬಾರಿ ಹಿಟ್ ವಿಕೆಟ್ ಮೂಲಕ ಇನಿಂಗ್ಸ್ ಅಂತ್ಯಗೊಳಿಸಿ ಸಾಯಿ ಸುದರ್ಶನ್ ಅನಗತ್ಯ ದಾಖಲೆ ಬರೆದಿದ್ದಾರೆ.
ಐಪಿಎಲ್ 2022 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೀರನ್ ಪೊಲಾರ್ಡ್ ಎಸೆದ ಬೌನ್ಸರ್ ಎಸೆತವನ್ನು ಪುಲ್ ಮಾಡುವ ಯತ್ನದಲ್ಲಿ ಸಾಯಿ ಸುದರ್ಶನ್ ಅವರ ಕೈಯಿಂದ ಬ್ಯಾಟ್ ಜಾರಿ ವಿಕೆಟ್‌ಗೆ ಬಡಿದಿತ್ತು.
ಇದೀಗ ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಜೇಕಬ್ ಡಫಿ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಬ್ಯಾಟ್ ಕೈ ಚೆಲ್ಲುವ ಮೂಲಕ ವಿಕೆಟ್ ಆಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಹಿಟ್ ವಿಕೆಟ್ ಆದ ಏಕೈಕ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಈ ಹಿಟ್ ವಿಕೆಟ್ನೊಂದಿಗೆ ಸಾಯಿ ಸುದರ್ಶನ್ 14 ರನ್ಗಳ ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದ್ದಾರೆ. ಆ ಬಳಿಕ ಬಂದ ಜೋಸ್ ಬಟ್ಲರ್ 29 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದರ ನಡುವೆ ಶುಭ್ಮನ್ ಗಿಲ್ (2) ಕ್ಲೀನ್ ಬೌಲ್ಡ್ ಆಗಿದ್ದರು. ಪರಿಣಾಮ ಆರ್ಸಿಬಿ ನೀಡಿದ 255 ರನ್ಗಳ ಕಠಿಣ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 19.3 ಓವರ್ಗಳಲ್ಲಿ 162 ರನ್ ಗಳಿಸಿ ಆಲೌಟ್ ಆಗಿದೆ.
ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 92 ರನ್ಗಳ ಅಮೋಘ ಜಯ ಸಾಧಿಸಿದೆ. ಈ ಜಯದೊಂದಿಗೆ ಆರ್ಸಿಬಿ ತಂಡವು ಐಪಿಎಲ್ 2026 ರಲ್ಲಿ ಫೈನಲ್ಗೇರಿದೆ.
ಮೇ 31 ರಂದು ಅಹಮದಾಬಾದ್ನಲ್ಲಿ ನಡೆಯಲಿರುವ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡವು ಗುಜರಾತ್ ಟೈಟಾನ್ಸ್ ಅಥವಾ ಸನ್ರೈಸರ್ಸ್ ಹೈದರಾಬಾದ್ ಅಥವಾ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.


