‘ಭಾರತ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ’: ಇರಾನ್ ಮೂಲದ ಪೈಲ್ವಾನ್ ಮಿರ್ಜಾ

Edited By:

Updated on: Mar 02, 2026 | 2:02 PM

ಇರಾನ್-ಇಸ್ರೇಲ್ ಯುದ್ಧದ ಆತಂಕದ ನಡುವೆಯೂ, ಇರಾನ್ ಕುಸ್ತಿಪಟು ಮಿರ್ಜಾ ದಾವಣಗೆರೆಯ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾ ಪ್ರೇಮ ಮೆರೆದರು. ಮಹಾರಾಷ್ಟ್ರದ ರವಿರಾಜ್ ವಿರುದ್ಧ ರೋಚಕ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತು. ಮಿರ್ಜಾ ಅವರ ಧೈರ್ಯ ಮತ್ತು ಹಿಂದೂಸ್ತಾನದ ಬಗೆಗಿನ ಅವರ ಪ್ರೀತಿ ದಾವಣಗೆರೆಯ ಜನರನ್ನು ಗೆದ್ದಿತು, ಗೌರವಾರ್ಥವಾಗಿ 1 ಲಕ್ಷ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ದಾವಣಗೆರೆ, ಮಾ.2: ಇರಾನ್ ದೇಶದ ಪೈಲ್ವಾನ್ ಮಿರ್ಜಾ ಅವರು ಕ್ರೀಡಾಭಿಮಾನಿಗಳ ಮನಗೆದ್ದಿದ್ದಾರೆ. ಇತ್ತ ಇರಾನ್-ಇಸ್ರೇಲ್ ನಡುವೆ ಭೀಕರ ಯುದ್ಧ ನಡೆಯುತ್ತಿದ್ದರೂ, ಪೂರ್ವ ನಿಗದಿಯಂತೆ ದಾವಣಗೆರೆಯ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಮೂಲಕ ಮಿರ್ಜಾ ಅವರು ಅದ್ಭುತ ಕ್ರೀಡಾ ಪ್ರೇಮ ಮೆರೆದಿದ್ದಾರೆ. ನಗರದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಹಾರಾಷ್ಟ್ರದ ಪುಣೆ ಮೂಲದ ಪೈಲ್ವಾನ್ ರವಿರಾಜ್ ಮತ್ತು ಇರಾನ್‌ನ ಮಿರ್ಜಾ ಮುಖಾಮುಖಿಯಾಗಿದ್ದರು. ಬರೋಬ್ಬರಿ 43 ನಿಮಿಷಗಳ ಕಾಲ ನಡೆದ ಈ ರೋಚಕ ಹೋರಾಟದಲ್ಲಿ ಇಬ್ಬರು ಪೈಲ್ವಾನರು ತಾಂತ್ರಿಕ ದಾಳಿ-ಪ್ರತಿದಾಳಿಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಅಂತಿಮವಾಗಿ ಪಂದ್ಯವು ಸಮಬಲದಲ್ಲಿ ಅಂತ್ಯಗೊಂಡಿತು. ಸ್ಪಷ್ಟ ಜಯಶಾಲಿ ನಿರ್ಧಾರವಾಗದ ಕಾರಣ ಇಬ್ಬರಿಗೂ ತಲಾ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಲಾಯಿತು. ತಮ್ಮ ದೇಶದಲ್ಲಿ ಯುದ್ಧದ ಪರಿಸ್ಥಿತಿ ಇದ್ದರೂ ಇಲ್ಲಿಗೆ ಆಗಮಿಸಿದ ಮಿರ್ಜಾ, “ಹಿಂದುಸ್ತಾನ ಮತ್ತು ಇಲ್ಲಿನ ಜನರ ಪ್ರೀತಿ ಅದ್ಭುತ” ಎಂದು ಹಾಡಿ ಹೊಗಳಿದ್ದಾರೆ. ಯುದ್ಧದ ಆತಂಕದ ನಡುವೆಯೂ ಕುಸ್ತಿ ಅಖಾಡಕ್ಕಿಳಿದ ಅವರ ಧೈರ್ಯಕ್ಕೆ ದಾವಣಗೆರೆ ಜನತೆ ಚಪ್ಪಾಳೆ ತಟ್ಟಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us