AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ, ಆದ್ರೆ ಇಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರಸ್ತೆಯಲ್ಲಿ ಪ್ರವಾಹದಂತೆ ಹರಿಯುತ್ತಿದೆ ನೀರು

ಹಲವೆಡೆ ಕುಡಿಯುವ ನೀರಿಗೆ ಹಾಹಾಕಾರ, ಆದ್ರೆ ಇಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ರಸ್ತೆಯಲ್ಲಿ ಪ್ರವಾಹದಂತೆ ಹರಿಯುತ್ತಿದೆ ನೀರು

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಆಯೇಷಾ ಬಾನು|

Updated on: Feb 27, 2024 | 7:38 AM

Share

ಬೇಸಿಗೆಯಲ್ಲಿ ಒಂದೆಡೆ ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಮತ್ತೊಂದೆಡೆ ಅಪಾರ ಕುಡಿಯುವ ನೀರು ಹಳ್ಳದ ಪಾಲಾಗಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ತಡರಾತ್ರಿ ಕುಡಿಯುವ ನೀರಿನ ಪೈಪ್​ ಒಡೆದು ಮನೆಗಳಿಗೆ ನೀರು ನುಗ್ಗಿದೆ. ಕಳೆದ 1 ತಿಂಗಳಿಂದ ನೀರು ಪೋಲಾಗುತ್ತಿದೆ. ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಗದಗ, ಫೆ.27: ರಾಜ್ಯದಲ್ಲಿ ನೀರಿನ ಅಭಾವ ಎದುರಾಗಿದೆ. ಅದೆಷ್ಟೋ ಜಿಲ್ಲೆಗಳಲ್ಲಿ ಹತ್ತಾರು ಕಿ.ಮೀ ದೂರ ಸಾಗಿ ಜನ ನೀರು ತರುವಂತಹ ಸ್ಥಿತಿ ಇದೆ. ಈ ನಡುವೆ ಗದಗ-ಬೆಟಗೇರಿಗೆ ಪೂರೈಸುವ ಪೈಪ್​ ಒಡೆದು ಮನೆಗಳಿಗೆ ನೀರು (Drinking Water) ನುಗ್ಗಿ ಅವಾಂತರವಾಗಿರುವ ಘಟನೆ ನಡೆದಿದೆ. ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ತಡರಾತ್ರಿ ಕುಡಿಯುವ ನೀರಿನ ಪೈಪ್​ ಒಡೆದು ಮನೆಗಳಿಗೆ ನೀರು ನುಗ್ಗಿದೆ.

ರಾತ್ರೋರಾತ್ರಿ ಪ್ರವಾಹದ ರೀತಿಯಲ್ಲಿ ಮನೆಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ನಿದ್ದೆಗೆ ಜಾರಿದ್ದ ಗ್ರಾಮಸ್ಥರು ನೀರು ನೋಡಿ ಹೌಹಾರಿದ್ದಾರೆ. ಗದಗ-ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಪೈಪ್ ಒಡೆದು ನೀರು ಮನೆಗಳಿಗೆ ನುಗ್ಗಿದ್ದು ಮನೆಯಲ್ಲಿದ್ದ ದವಸ, ಧಾನ್ಯಗಳು ನೀರು ಪಾಲಾಗಿವೆ. ನೀರು ಹೊರ ಹಾಕಲು ಮಹಿಳೆಯರು ಹರಸಾಹಸಪಟ್ರು. ನೀರಿನ ರಭಸಕ್ಕೆ 10ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಜಿಲ್ಲಾಡಳಿತ, ಗದಗ ನಗರಸಭೆ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಒಂದು ತಿಂಗಳಿಂದ ಪೈಪ್ ಒಡೆದು ನೀರು ಸೋರಿಕೆಯಾಗುತ್ತಿದೆ. ಈ ಬಗ್ಗೆ ಡಿಸಿ, ನಗರಸಭೆ ಆಯುಕ್ತರು, ತಹಶೀಲ್ದಾರ ಸೇರಿ ಹಲವು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ನದಿಯಿಂದ ಇವತ್ತು ನೀರು ಹರಿಸುತ್ತಿದ್ದಂತೆ ಪೈಪ್ ಒಡೆದು ರಾದ್ಧಾಂತವಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.

ಗದಗ ಡಿಸಿ ವೈಶಾಲಿ, ಗದಗ ನಗರಸಭೆ ಆಯುಕ್ತ ಮಾರುತಿ, ಮುಂಡರಗಿ ತಹಶೀಲ್ದಾರ ಧನಂಜಯ್ ಅವ್ರಿಗೆ ಫೋನ್ ಮಾಡಿದ್ರು ಪ್ರಯೋಜನವಾಗಿಲ್ಲ. ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀರಿಗಾಗಿ ಹಾಹಾಕಾರವಿದೆ. ಜಿಲ್ಲಾಡಳಿತ, ನಗರಸಭೆ ಬೇಜವಾಬ್ದಾರಿಗೆ ಅಪಾರ ನೀರು ಹಾಳಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ