AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SMAT 2025: 33 ಸಿಕ್ಸರ್‌, 516 ರನ್..! ಇಶಾನ್ ಕಿಶನ್ ಭಾರತ ತಂಡಕ್ಕೆ ಎಂಟ್ರಿ ಯಾವಾಗ?

SMAT 2025: 33 ಸಿಕ್ಸರ್‌, 516 ರನ್..! ಇಶಾನ್ ಕಿಶನ್ ಭಾರತ ತಂಡಕ್ಕೆ ಎಂಟ್ರಿ ಯಾವಾಗ?

ಪೃಥ್ವಿಶಂಕರ
|

Updated on: Dec 19, 2025 | 3:29 PM

Share

Ishan Kishan Century: ಇಶಾನ್ ಕಿಶನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸಿ ಜಾರ್ಖಂಡ್‌ಗೆ ಚಾಂಪಿಯನ್ ಪಟ್ಟ ತಂದುಕೊಟ್ಟರು. ಟೂರ್ನಿಯಲ್ಲಿ 516 ರನ್ ಗಳಿಸಿ, ಎರಡು ಶತಕಗಳೊಂದಿಗೆ ಅಮೋಘ ಪ್ರದರ್ಶನ ನೀಡಿದರು. ಕಳೆದ ಎರಡು ವರ್ಷಗಳಿಂದ ಭಾರತ ತಂಡದಿಂದ ಹೊರಗಿರುವ ಕಿಶನ್, ಈ ಸ್ಥಿರ ಪ್ರದರ್ಶನದ ನಂತರ ಆಯ್ಕೆದಾರರ ಗಮನ ಸೆಳೆದಿದ್ದು, ಅವರ ಭಾರತ ತಂಡಕ್ಕೆ ಮರು-ಸೇರ್ಪಡೆ ಕುರಿತು ನಿರೀಕ್ಷೆ ಹೆಚ್ಚಿದೆ.

ಜಾರ್ಖಂಡ್ ನಾಯಕ ಇಶಾನ್ ಕಿಶನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ ಕೇವಲ 45 ಎಸೆತಗಳಲ್ಲಿ ಅಬ್ಬರದ ಶತಕ ಸಿಡಿಸುವ ಮೂಲಕ ತಂಡವನ್ನು ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 10 ಸಿಕ್ಸರ್‌ಗಳನ್ನು ಬಾರಿಸಿದ ಕಿಶನ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಫೈನಲ್‌ನಲ್ಲಿ ಶತಕ ಬಾರಿಸಿದ ಮೊದಲ ನಾಯಕ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು, ಶ್ರೇಯಸ್ ಅಯ್ಯರ್ ಕರ್ನಾಟಕ ವಿರುದ್ಧ ಅಜೇಯ 98 ರನ್ ಗಳಿಸುವ ಮೂಲಕ ನಾಯಕನಾಗಿ ಫೈನಲ್‌ನಲ್ಲಿ ಅತ್ಯಧಿಕ ಇನ್ನಿಂಗ್ಸ್‌ಗಳ ದಾಖಲೆಯನ್ನು ಹೊಂದಿದ್ದರು. ಕಿಶನ್ ಶತಕದ ಸಹಾಯದಿಂದ ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡವು 262 ರನ್‌ಗಳ ದಾಖಲೆಯ ಸ್ಕೋರ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಹರಿಯಾಣ ತಂಡವು ಕೇವಲ 193 ರನ್‌ಗಳನ್ನು ಕಲೆಹಾಕಲಷ್ಟೇ ಶಕ್ತವಾಯಿತು.

ಈ ಆವೃತ್ತಿಯ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಇಶಾನ್ ಕಿಶನ್ ಬ್ಯಾಟ್ ಅಬ್ಬರಿಸಿದೆ. ಇಡೀ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಕಿಶನ್ ಬರೋಬ್ಬರಿ 516 ರನ್ ಕಲೆಹಾಕಿದರು. ಇದರಲ್ಲಿ ಎರಡು ಶತಕಗಳು ಸೇರಿವೆ. ಸರಿಸುಮಾರು 200 ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ ಕಿಶನ್, 64.5 ರ ಸರಾಸರಿಯಲ್ಲಿ ಒಟ್ಟಾರೆಯಾಗಿ 33 ಸಿಕ್ಸರ್‌ಗಳು ಹಾಗೂ 50 ಕ್ಕೂ ಹೆಚ್ಚು ಬೌಂಡರಿಗಳನ್ನು ಬಾರಿಸಿದರು.

ಇಶಾನ್ ಕಿಶನ್ ಕಳೆದ ಎರಡು ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗಿದ್ದಾರೆ. ಅವರು ಕೊನೆಯ ಬಾರಿಗೆ ನವೆಂಬರ್ 28 ರಂದು ಗುವಾಹಟಿಯಲ್ಲಿ ನಡೆದ ಟಿ20 ಪಂದ್ಯದಲ್ಲಿ ತಂಡದ ಪರ ಆಡಿದ್ದರು. ಅಂದಿನಿಂದ ತಂಡದಿಂದ ಹೊರಗಿದ್ದಾರೆ. 2023 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಅರ್ಧಕ್ಕೆ ಭಾರತಕ್ಕೆ ವಾಪಸ್ಸಾಗಿದ್ದ ಕಿಶನ್ ಅಂದಿನಿಂದ ತಂಡಕ್ಕೆ ಆಯ್ಕೆಯಾಗಿಲ್ಲ. ಈಗ ಇಶಾನ್ ಕಿಶನ್ ಸ್ಥಿರವಾಗಿ ಉತ್ತಮ ಪ್ರದರ್ಶನ ನೀಡುತ್ತಿರುವುದರಿಂದ ಆಯ್ಕೆದಾರರು ಅವರನ್ನು ಯಾವಾಗ ತಂಡಕ್ಕೆ ಮರಳಿ ಆಯ್ಕೆ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ