IND vs NAM: 6,6,6,6,4.. ಒಂದೇ ಓವರ್ನಲ್ಲಿ 28 ರನ್ ಸಿಡಿಸಿದ ಕಿಶನ್
Ishan Kishan: ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ, 24 ಎಸೆತಗಳಲ್ಲಿ 61 ರನ್ ಗಳಿಸುವ ಮೂಲಕ ಸಿಡಿಲಬ್ಬರದ ಇನ್ನಿಂಗ್ಸ್ ಆಡಿದರು. ಈ ಮೂಲಕ ಅವರು ಟಿ20 ವಿಶ್ವಕಪ್‌ನಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.
ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಪಾಕೆಟ್ ಡೈನಮೋ ಖ್ಯಾತಿಯ ಇಶಾನ್ ಕಿಶನ್ ಸಿಡಿಲಬ್ಬರದ ಇನ್ನಿಂಗ್ಸ್ ಆಡಿದರು. ಈ ಪಂದ್ಯದಲ್ಲಿ ಕಿಶನ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಬಾರಿಸಿ, 24 ಎಸೆತಗಳಲ್ಲಿ 61 ರನ್ ಗಳಿಸಿ ಔಟಾದರು. ಇಶಾನ್ ಅವರ ಈ ಇನ್ನಿಂಗ್ಸ್‌ನಲ್ಲಿ ಆರು ಬೌಂಡರಿಗಳು ಮತ್ತು ಐದು ಸಿಕ್ಸರ್‌ಗಳು ಸೇರಿದ್ದವು. ಅದರಲ್ಲಿ ಒಂದೇ ಓವರ್ನಲ್ಲಿ 4 ಸಿಕ್ಸರ್‌ಗಳು ಸಿಡಿದಿದ್ದು ವಿಶೇಷವಾಗಿತ್ತು.
ಜೆಜೆ ಸ್ಮಿತ್ ಬೌಲ್ ಮಾಡಿದ ಈ ಓವರ್ನ ಮೊದಲ ಎಸೆತದಲ್ಲಿ ಕಿಶನ್ಗೆ ಯಾವುದೇ ರನ್ ಕಲೆಹಾಕಲು ಸಾಧ್ಯವಾಗಲಿಲ್ಲ. ಆದರೆ ಆ ನಂತರದ ಸತತ 4 ಎಸೆತಗಳನ್ನು ಕಿಶನ್ ಸಿಕ್ಸರ್ಗಟ್ಟಿದರು. ಕೊನೆಯ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಈ ಓವರ್ನಲ್ಲಿ ಕಿಶನ್ 28 ರನ್ ಕಲೆಹಾಕಿದರು. ಈ ಅಬ್ಬರದೊಂದಿಗೆ ಕಿಶನ್ ಕೇವಲ 20 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು.
ಇಶಾನ್ ಕಿಶನ್ ಅರ್ಧಶತಕ ಗಳಿಸಿದ ತಕ್ಷಣ, ಟಿ20 ವಿಶ್ವಕಪ್‌ನಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಧೋನಿ, ದಿನೇಶ್ ಕಾರ್ತಿಕ್ ಮತ್ತು ರಿಷಭ್ ಪಂತ್ ಅವರಂತಹ ವಿಕೆಟ್ ಕೀಪರ್‌ಗಳು ಟಿ20 ವಿಶ್ವಕಪ್‌ನಲ್ಲಿ ಆಡಿದ್ದಾರೆ, ಆದರೆ ಅವರು ಎಂದಿಗೂ ಅರ್ಧಶತಕ ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಈಗ, ಇಶಾನ್ ಈ ಸಾಧನೆ ಮಾಡಿದ್ದಾರೆ.