ರಾಯಚೂರು: ಚಂದ್ರಯಾನ-3 ವಿಕ್ರಮ ಲ್ಯಾಂಡರ್ ನ ಲ್ಯಾಂಡಿಂಗ್ (Chandrayaan-3 Vikram Lander landing) ನಿರ್ವಿಘ್ನವಾಗಿ ನಡೆಯಲಿ ಅಂತ ಮೈಸೂರು ಜಿಲ್ಲೆ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಟಿಎಸ್ ಶ್ರೀವತ್ಸ (TS Srivatsa) ಮತ್ತು ಮೈಸೂರು ನಗರ ಬಿಜೆಪಿ ಘಟಕದ ಪದಾಧಿಕಾರಿಗಳೊಂದಿಗೆ ರಾಯಚೂರಿಗೆ ಹತ್ತಿರದ ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗೆ (Mantralaya Raghvendra Swamy Mutt) ವಿಶೇಷ ಆರಾಧನೆ ಸಲ್ಲಿಸಿದರು. ಚಂದ್ರಯಾನ-3 ಯಶಸ್ಸಿನ ಜೊತೆಗೆ ರಾಜ್ಯಕ್ಕೆ ಒಳ್ಳೆಯದಾಗಲಿ ಮತ್ತು ಮುಂಗಾರು ಮಳೆ ವಿಫಲಗೊಂಡಿರುವುದರಿಂದ ರೈತ ಸಮುದಾಯಕ್ಕೆ ಸಂಕಷ್ಟ ಎದುರಾಗದಿರಲಿ ಎಂಬ ಹರಕೆಗಳನ್ನು ಸಹ ಶ್ರೀವತ್ಸ ಮತ್ತು ಸಂಗಡಿಗರು ಗುರುರಾಯರಿಗೆ ಸಮರ್ಪಿಸಿದರು. ಟಿವಿ9 ಕನ್ನಡ ವಾಹಿನಿಯ ರಾಯಚೂರು ವರದಿಗಾರನೊಂದಿಗೆ ಮಾತಾಡಿದ ಅವರು, ಜೈ ಜವಾನ್ ಜೈ ಕಿಸಾನ್ ಉಕ್ತಿಗೆ ದಿವಂಗತ ಪ್ರಧಾನ ಮಂತ್ರಿ ಅಟಲ ಬಿಹಾರಿ ವಾಜಪೇಯಿ ಅವರು ಜೈ ವಿಜ್ಞಾನ ಸಹ ಸೇರಿಸಿದ್ದರು, ಹಾಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ವಿಜ್ಞಾಮಿಗಳ ಪರಿಶ್ರಮ ಸಫಲವಾಗಲಿ ಎಂದು ಪ್ರಾರ್ಥಸಿರುವುದಾಗಿ ಹೇಳಿದರು. ಅದಲ್ಲದೆ, ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಇಕಾನಮಿ ಮಾಡಬೇಕೆನ್ನುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂಕಲ್ಪ ಆದಷ್ಟು ಬೇಗ ಈಡೇರಲಿ ಅಂತಲೂ ಹರಕೆ ಸಲ್ಲಿಸಿರುವುದಾಗಿ ಶಾಸಕ ಶ್ರೀವತ್ಸ ಹೇಳಿದರು.
ಮತ್ತಷ್ಟು ಕನ್ನಡ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ