IND vs SA: ಭಾರತೀಯ ಕ್ರಿಕೆಟ್‌ನಲ್ಲಿ ಈ ದಾಖಲೆ ಬರೆದ ಮೊದಲ ವೇಗಿ ಜಸ್ಪ್ರೀತ್ ಬುಮ್ರಾ

Updated on: Dec 09, 2025 | 10:48 PM

Jasprit Bumrah's Historic Feat: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 100 ವಿಕೆಟ್‌ಗಳನ್ನು ಪೂರೈಸಿದರು. ಇದು ಅವರ ಅದ್ಭುತ ಸ್ಥಿರತೆಗೆ ಸಾಕ್ಷಿ. ಅತ್ಯಂತ ಮುಖ್ಯವಾಗಿ, ಟೆಸ್ಟ್, ಏಕದಿನ ಮತ್ತು ಟಿ20 ಎಂಬ ಮೂರು ಅಂತರರಾಷ್ಟ್ರೀಯ ಸ್ವರೂಪಗಳಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಐತಿಹಾಸಿಕ ದಾಖಲೆ ನಿರ್ಮಿಸಿದರು. ಈ ಮೂಲಕ ವಿಶ್ವ ಕ್ರಿಕೆಟ್‌ನ ಅಪರೂಪದ ಸಾಧಕರಲ್ಲಿ ಬುಮ್ರಾ ಒಬ್ಬರಾಗಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ದಾಟಿದ್ದಾರೆ. ಈ ಮೊದಲ ಟಿ20 ಪಂದ್ಯದಲ್ಲಿ 2 ವಿಕೆಟ್​ ಉರುಳಿಸಿದ ಜಸ್ಪ್ರೀತ್ ಬುಮ್ರಾ ಟಿ20 ಕ್ರಿಕೆಟ್‌ನಲ್ಲಿ ಈ ಹಿಂದೆ ಯಾವುದೇ ಭಾರತೀಯ ಬೌಲರ್ ಸಾಧಿಸದ ಸಾಧನೆಯನ್ನು ಮಾಡಿದ್ದಾರೆ. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ತಮ್ಮ ಮೊದಲ ವಿಕೆಟ್ ಪಡೆಯುವ ಮೂಲಕ ತಮ್ಮ ಟಿ20 ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 100 ವಿಕೆಟ್‌ಗಳನ್ನು ಪೂರೈಸಿದರು.

ಇದರೊಂದಿಗೆ, ಬುಮ್ರಾ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತದ ಎರಡನೇ ಬೌಲರ್ ಎನಿಸಿಕೊಂಡರು. ಬುಮ್ರಾ ಕೇವಲ 81 ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದು, ಇದು ಅವರ ಅದ್ಭುತ ಸ್ಥಿರತೆ ಮತ್ತು ಮಾರಕ ಬೌಲಿಂಗ್‌ಗೆ ಸಾಕ್ಷಿಯಾಗಿದೆ.

ಎಲ್ಲಕ್ಕಿಂತ ಮುಖ್ಯವಾಗಿ, ಜಸ್ಪ್ರೀತ್ ಬುಮ್ರಾ ಈಗ ಟೆಸ್ಟ್, ಏಕದಿನ ಮತ್ತು ಟಿ20 ಎಂಬ ಮೂರು ಅಂತರರಾಷ್ಟ್ರೀಯ ಸ್ವರೂಪಗಳಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಬುಮ್ರಾ ಟೆಸ್ಟ್‌ನಲ್ಲಿ 234 ಮತ್ತು ಏಕದಿನದಲ್ಲಿ 149 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಶ್ವ ಕ್ರಿಕೆಟ್‌ನಲ್ಲಿಯೂ ಸಹ, ಮೂರು ಸ್ವರೂಪಗಳಲ್ಲಿ 100+ ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿ ತುಂಬಾ ಚಿಕ್ಕದಿದ್ದು, ಈ ಪಟ್ಟಿಯಲ್ಲಿ ಬುಮ್ರಾ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.