‘ದಿಲ್ಲಿಗೆ ಹೋದಾಗೆಲ್ಲಾ ಅದೊಂದೇ ಪ್ರಶ್ನೆ ಕೇಳ್ತಾರೆ’: ಸ್ಟಿಂಗ್ ಆಪರೇಷನ್ನಿಂದ ಕರ್ನಾಟಕ ತಲೆ ತಗ್ಗಿಸುವಂತಾಗಿದೆ ಎಂದ ಡಾ. ಕೆ. ಸುಧಾಕರ್
ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕರ್ನಾಟಕ ಇಡೀ ದೇಶದಲ್ಲಿ ನಗೆಪಾಟಲಿಗೀಡಾಗುತ್ತಿದೆ ಎಂದು ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಸ್ಟಿಂಗ್ ಆಪರೇಷನ್ ಕುರಿತು ದಿಲ್ಲಿಯಲ್ಲಿ ಪ್ರಶ್ನಿಸಲಾಗುತ್ತಿದೆ ಎಂದ ಅವರು, ರಾಜ್ಯದ ಗತವೈಭವ ಮರುಸ್ಥಾಪನೆಗೆ ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧ ಎಂದರು. 2028ರ ಚುನಾವಣೆಯಲ್ಲಿ ರಾಜ್ಯ ರಾಜಕಾರಣಕ್ಕೆ ಮರಳುವ ಕುರಿತು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು, ನ.7: ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು, ವಿಶೇಷವಾಗಿ ಸ್ಟಿಂಗ್ ಆಪರೇಷನ್ ಕುರಿತು ರಾಜ್ಯದ ಇಮೇಜ್‌ಗೆ ಧಕ್ಕೆ ಉಂಟಾಗಿದ್ದು, ಇಡೀ ದೇಶದಲ್ಲಿ ರಾಜ್ಯವು ನಗೆಪಾಟಲಿಗೀಡಾಗಿದೆ ಎಂದು ಬಿಜೆಪಿ ಸಂಸದ ಡಾ. ಕೆ. ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ದಿಲ್ಲಿಗೆ ಹೋದಾಗೆಲ್ಲಾ ತಮ್ಮನ್ನು ಸ್ಟಿಂಗ್ ಆಪರೇಷನ್ ಕುರಿತು ಪ್ರಶ್ನಿಸಲಾಗುತ್ತಿದೆ. ಆದರೆ, ಅದರ ತನಿಖೆ ಮಾಡಿಲ್ಲ, ತಮಗೆ ಅದರ ಬಗ್ಗೆ ಗೊತ್ತಿಲ್ಲ ಎಂದು ಹೇಳುವ ಪರಿಸ್ಥಿತಿ ಇದೆ ಎಂದು ತಿಳಿಸಿದರು. ರಾಜ್ಯವನ್ನು ಮತ್ತೆ ಗತವೈಭವಕ್ಕೆ ಕೊಂಡೊಯ್ಯಲು ಪಕ್ಷದ ಆಡಳಿತ ಅಥವಾ ಮೈತ್ರಿ ಆಡಳಿತ ಬರಬೇಕು. ಈ ನಿಟ್ಟಿನಲ್ಲಿ ಯಾರೆಲ್ಲಾ ರಾಜ್ಯಕ್ಕೆ ಬರಬೇಕು ಎಂಬುದರ ಬಗ್ಗೆ ಹೈಕಮಾಂಡ್ ಅವಲೋಕಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸುಧಾಕರ್ ಹೇಳಿದರು. 2028ರ ಚುನಾವಣೆಯಲ್ಲಿ ರಾಜ್ಯ ರಾಜಕಾರಣಕ್ಕೆ ಮರಳುವ ಸಾಧ್ಯತೆಗಳ ಬಗ್ಗೆ ಕೇಳಿದಾಗ, ಹೈಕಮಾಂಡ್ ನನ್ನನ್ನು ಸಂಸತ್‌ಗೆ ಕಳುಹಿಸಿದೆ. ಆದರೆ, ನಾನು ಮೂಲತಃ ರಾಜ್ಯ ರಾಜಕಾರಣದಲ್ಲೇ ಇದ್ದವನು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ನಾಟಕವನ್ನು ಪುನಃ ಉನ್ನತ ಸ್ಥಾನಕ್ಕೆ ತರಲು ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ತಾನು ಬದ್ಧ ಎಂದು ಸ್ಪಷ್ಟಪಡಿಸಿದರು.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
