‘ಕೆ. ಶಿವರಾಮ್ ಅವರಿಗಾಗಿಯೇ ಆ ಸಿನಿಮಾ ಮಾಡಿದ್ವಿ’: ತರುಣ್ ಸುಧೀರ್ ಭಾವುಕ ಮಾತು
‘ಇಂದು ಶಿವರಾಮ್ ಅವರು ಇಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತುಂಬ ಶಿಸ್ತಿನಿಂದ ಇದ್ದ ಅವರು ಈ ವಯಸ್ಸಿನಲ್ಲಿ ನಿಧನರಾಗಿದ್ದಕ್ಕೆ ಬೇಸರ ಆಗುತ್ತಿದೆ. ಎಲ್ಲ ಒಳ್ಳೆಯವರಿಗೆ ಈ ರೀತಿ ಆಗುತ್ತಿದೆ ಅಂತ ನೋವಾಗುತ್ತಿದೆ’ ಎಂದು ನಿರ್ದೇಶಕ ತರುಣ್ ಸುಧೀರ್ ಹೇಳಿದ್ದಾರೆ. ಅಂತಿಮ ದರ್ಶನ ಪಡೆದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಶಿವರಾಮ್ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಸಿನಿಮಾ ನಟ, ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಅವರ ನಿಧನಕ್ಕೆ (K Shivaram Death) ಕನ್ನಡ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಗುರುವಾರ (ಫೆ.29) ಅವರು ಇಹಲೋಕ ತ್ಯಜಿಸಿದರು. ಇಂದು (ಮಾರ್ಚ್ 1) ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿನಿಮಾ ಕ್ಷೇತ್ರದ ಸೆಲೆಬ್ರಿಟಿಗಳು, ರಾಜಕೀಯದ ಗಣ್ಯರು, ಅಪಾರ ಸಂಖ್ಯೆಯ ಬೆಂಬಲಿಗರು ಹಾಗೂ ಅಭಿಮಾನಿಗಳು ಬಂದು ಅಂತಿಮ ನಮನ ಸಲ್ಲಿಸಿದ್ದಾರೆ. ‘ಕಾಟೇರ’ ನಿರ್ದೇಶಕ ತರುಣ್ ಸುಧೀರ್ (Tharun Sudhir) ಕೂಡ ಅಂತಿಮ ದರ್ಶನ ಪಡೆದಿದ್ದಾರೆ. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಶಿವರಾಮ್ ಜೊತೆಗಿನ ಒಡನಾಟದ ದಿನಗಳನ್ನು ತರುಣ್ ಸುಧೀರ್ ನೆನಪಿಸಿಕೊಂಡಿದ್ದಾರೆ. ಕೆ. ಶಿವರಾಮ್ (K Shivaram) ಅವರು ಕೊನೆಯದಾಗಿ ನಟಿಸಿದ್ದ ‘ಟೈಗರ್’ ಚಿತ್ರಕ್ಕೆ ತರುಣ್ ಸುಧೀರ್ ಅವರು ಕಥೆ ಬರೆದಿದ್ದರು. ‘ನಾವು ಆ ಸಿನಿಮಾದ ಕಥೆ ಬರೆಯುವಾಗ ಹೀರೋ ಪ್ರದೀಪ್ಗಿಂತಲೂ ಹೆಚ್ಚಾಗಿ ಶಿವರಾಮ್ ಅವರ ಮೇಲೆ ನನಗೆ ಕ್ರೇಜ್ ಇತ್ತು. ಅವರನ್ನು ಡಿಫರೆಂಟ್ ಆಗಿ ತೋರಿಸಬೇಕು ಎಂಬ ಉದ್ದೇಶದಿಂದ ಮಾಡಿದ ಸಿನಿಮಾ ಅದು. ತುಂಬಾ ಇಷ್ಟಪಟ್ಟು ಅವರನ್ನು ಬೇರೆ ಬೇರೆ ಶೇಡ್ಗಳಲ್ಲಿ ತೋರಿಸಿದ್ವಿ. ಅದು ಅವರ ಕೊನೆಯ ಸಿನಿಮಾ ಆಗುತ್ತದೆ ಅಂತ ನಾವು ಅಂದುಕೊಂಡಿರಲಿಲ್ಲ. ಯಾಕೆಂದರೆ, ಆ ಚಿತ್ರದ ಬಳಿಕವೂ ಅವರು ಬೇರೆ ಸಿನಿಮಾದ ಪ್ಲ್ಯಾನ್ ಬಗ್ಗೆ ಮಾತನಾಡುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ತರುಣ್ ಸುಧೀರ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.