ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ
ಕಲಬುರಗಿಯ ಮಾಶಾಳ ಮಠದ ಶ್ರೀ ಮರುಳಾರಾಧ್ಯ ಸ್ವಾಮೀಜಿ ಮದ್ಯದ ಬಾಟಲಿಯೊಂದಿಗೆ ಸಿನಿಮಾ ಹಾಡು ಹಾಡಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೂಜ್ಯ ಮಠದಲ್ಲಿ ಪವಿತ್ರ ಶ್ರಾವಣ ಮಾಸದಲ್ಲಿ ನಡೆದ ಈ ಘಟನೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿಂದೆ ಖಡ್ಗದ ಹೇಳಿಕೆಯಿಂದ ವಿವಾದ ಸೃಷ್ಟಿಸಿದ್ದ ಸ್ವಾಮೀಜಿಯ ನಡೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕಲಬುರಗಿ, ಆ.17 : ಪೂಜ್ಯ ಭಾವನೆಯಿಂದ ನೋಡುವ ಮಠದಲ್ಲೇ ಸ್ವಾಮೀಜಿಯೊಬ್ಬರು ಎದುರಿಗೆ ಮದ್ಯದ ಬಾಟಲ್ ಇಟ್ಟುಕೊಂಡು ಸಿನಿಮಾ ಹಾಡು ಹಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಶ್ರೀ ಮರುಳಾರಾಧ್ಯ ಸ್ವಾಮೀಜಿ ಅವರ ಬಿಂದಾಸ್ ಮೋಜಿನ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾವಿಧಾರಿ ಸ್ವಾಮೀಜಿ ಕೈಯಲ್ಲಿ ಮೈಕ್ ಹಿಡಿದು, ಎದುರುಗಡೆ ಮದ್ಯದ (ಮದ್ಯದ ಬಾಟಲಿ) ಇಟ್ಟುಕೊಂಡು ಪ್ರಸಿದ್ಧ ರವಿಚಂದ್ರನ್ ಅಭಿನಯದ “ಯಾರಿವಳು ಯಾರಿವಳು…” ಎಂಬ ಜನಪ್ರಿಯ ಸಿನಿಮಾ ಹಾಡನ್ನು ಮಠದಲ್ಲಿಯೇ ಗತ್ತಿನಿಂದ ಹಾಡಿದ್ದಾರೆ. ಪವಿತ್ರ ಶ್ರಾವಣ ಮಾಸದ ಆರಂಭದಲ್ಲೇ ಮಠದ ಆವರಣದಲ್ಲೇ ನಡೆದ ಈ ಘಟನೆಯ ವೀಡಿಯೋ ಹೊರಬಿದ್ದಿದ್ದು, ಸ್ವಾಮೀಜಿಯ ನಡವಳಿಕೆಗೆ ಸ್ಥಳೀಯರು ಹಾಗೂ ಧಾರ್ಮಿಕ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಈ ಹಿಂದೆ ಇದೇ ಸ್ವಾಮೀಜಿ “ಹಿಂದೂ ಧರ್ಮದ ರಕ್ಷಣೆಗಾಗಿ ಮಕ್ಕಳ ಕೈಯಲ್ಲಿ ಪೆನ್ನಿನ ಬದಲು ಖಡ್ಗ ಕೊಡಿ” ಎಂದು ನೀಡಿದ್ದ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಅವರ ಈ ‘ಬಿಂದಾಸ್’ ಅವತಾರ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ