ಐರನ್ಮ್ಯಾನ್ ಟ್ರೈಯಥ್ಲಾನ್ ಈವೆಂಟ್: ರಾಜ್ಯ ಮತ್ತು ಕರ್ನಾಟಕ ಪೊಲೀಸ್ಗೆ ಹೆಮ್ಮೆ ತಂದಿರುವ ಸಂದೀಪ್ ಪಾಟೀಲ್
ಐರನ್ನ್ಯಾನ್ ಟ್ರೈಯಥ್ಲಾನ್ ಈವೆಂಟ್ ನಲ್ಲಿ ಭಾಗಿಯಾಗಲು ಸಂದೀಪ್ ಪಾಟೀಲ್ ಸುಮಾರು ಒಂದೂವರೆ ವರ್ಷಗಳಿಂದ ತಯಾರಿ ನಡೆಸಿದ್ದರಂತೆ. ಪಕ್ಕಾ ಸಸ್ಯಾಹಾರಿಯಾಗಿರುವ ಅವರಿಗೆ ದೇಹದಲ್ಲಿ ಎನರ್ಜಿ ಲೆವೆಲ್ಗಳನ್ನು ಕಾಯ್ದುಕೊಳ್ಳುವುದು ಕಠಿಣ ಸವಾಲಾಗಿತ್ತು ಮತ್ತು ತರಬೇತಿಯ ಜೊತೆ ವೃತ್ತಿಬದುಕಿನಲ್ಲಿ ಯಾವುದೇ ರೀತಿಯ ಹೆಚ್ಚುಕಮ್ಮಿಯಾಗದಂತೆ ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವುದು ಅವರ ಅದ್ಯತೆಯಾಗಿತ್ತು.
ಬೆಂಗಳೂರು, ಆಗಸ್ಟ್ 29: ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿ ಮತ್ತು ಕರ್ನಾಟಕ ರಾಜ್ಯ ಮೀಸಲು ಪಡೆಯ ಐಜಿಪಿಯಾಗಿರುವ ಸಂದೀಪ್ ಪಾಟೀಲ್ ಅವರು ರಾಜ್ಯ ಮತ್ತು ಪೊಲೀಸ್ ಇಲಾಖೆಗೆ ಹೆಮ್ಮೆಯುಂಟಾಗುವ ಸಾಧನೆಯೊಂದನ್ನು ಮಾಡಿದ್ದಾರೆ. ವರ್ಲ್ಡ್ ಟ್ರೈಯಥ್ಲಾನ್ ಕಾರ್ಪೋರೇಷನ್ (World Triathlon Corporation) ಆಯೋಜಿಸುವ ಐರನ್ನ್ಯಾನ್ ಟ್ರೈಯಥ್ಲಾನ್ ಈವೆಂಟ್ನಲ್ಲಿ ಭಾಗಿಯಾಗಿ ತಮ್ಮ ಫಿಟ್ನೆಸ್ ಸಾಮರ್ಥ್ಯ ಮತ್ತು ಸಹಿಷ್ಣುತೆಯ ಪರಿಚಯ ನೀಡಿದ್ದಾರೆ. ಡೆನ್ಮಾರ್ಕ್ ರಾಜಧಾನಿ ಕೋಪನ್ಹೇಗನ್ನಲ್ಲಿ ನಡೆದ ಐರನ್ನ್ಯಾನ್ ಟ್ರೈಯಥ್ಲಾನ್ ಸಾಮಾನ್ಯವಾದುದಲ್ಲ, ದೇಹವನ್ನು ತೀವ್ರವಾಗಿ ದಂಡಿಸುವ ಮೂರು ಸ್ಪರ್ಧೆಗಳನ್ನು ಇದು ಒಳಗೊಂಡಿರುತ್ತದೆ. ಸಮುದ್ರದಲ್ಲಿ 3.8 ಕಿಮೀ ಈಜುವುದು, 180 ಕಿಮೀಗಳಷ್ಟು ಸೈಕ್ಲಿಂಗ್ ಮತ್ತು 42 ಕಿಮೀ ಓಟ (ಮ್ಯಾರಥಾನ್); ಎಲ್ಲವನ್ನೂ ಸಂದೀಪ್ ಪಾಟೀಲ್ 14 ಗಂಟೆ 45 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ! ಅವರು ಐರನ್ಮ್ಯಾನ್ ಅನ್ನೋದಿಕ್ಕೆ ಸಂದೇಹವೇ ಬೇಡ. ಈ ಜಾಗತಿಕ ಈವೆಂಟ್ನಲ್ಲಿ ಕರ್ನಾಟಕ ಐಪಿಎಸ್ ಕೇಡರ್ನಿಂದ ಭಾಗವಹಿಸಿದ ಏಕೈಕ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಆಗಿದ್ದಾರೆ.
ಇದನ್ನೂ ಓದಿ: Independence Day: ಕರ್ನಾಟಕದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ, 18 ಪೊಲೀಸರಿಗೆ ವಿಶಿಷ್ಟ ಸೇವಾ ಪದಕ ಘೋಷಣೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

