ಐರನ್​ಮ್ಯಾನ್ ಟ್ರೈಯಥ್ಲಾನ್ ಈವೆಂಟ್: ರಾಜ್ಯ ಮತ್ತು ಕರ್ನಾಟಕ ಪೊಲೀಸ್​ಗೆ ಹೆಮ್ಮೆ ತಂದಿರುವ ಸಂದೀಪ್ ಪಾಟೀಲ್

Updated on: Aug 29, 2025 | 3:59 PM

ಐರನ್​ನ್ಯಾನ್ ಟ್ರೈಯಥ್ಲಾನ್ ಈವೆಂಟ್ ನಲ್ಲಿ ಭಾಗಿಯಾಗಲು ಸಂದೀಪ್ ಪಾಟೀಲ್ ಸುಮಾರು ಒಂದೂವರೆ ವರ್ಷಗಳಿಂದ ತಯಾರಿ ನಡೆಸಿದ್ದರಂತೆ. ಪಕ್ಕಾ ಸಸ್ಯಾಹಾರಿಯಾಗಿರುವ ಅವರಿಗೆ ದೇಹದಲ್ಲಿ ಎನರ್ಜಿ ಲೆವೆಲ್​ಗಳನ್ನು ಕಾಯ್ದುಕೊಳ್ಳುವುದು ಕಠಿಣ ಸವಾಲಾಗಿತ್ತು ಮತ್ತು ತರಬೇತಿಯ ಜೊತೆ ವೃತ್ತಿಬದುಕಿನಲ್ಲಿ ಯಾವುದೇ ರೀತಿಯ ಹೆಚ್ಚುಕಮ್ಮಿಯಾಗದಂತೆ ಅದಕ್ಕೆ ಸಂಪೂರ್ಣ ನ್ಯಾಯ ಒದಗಿಸುವುದು ಅವರ ಅದ್ಯತೆಯಾಗಿತ್ತು.

ಬೆಂಗಳೂರು, ಆಗಸ್ಟ್ 29: ಕರ್ನಾಟಕ ಕೇಡರ್​ನ ಐಪಿಎಸ್ ಅಧಿಕಾರಿ ಮತ್ತು ಕರ್ನಾಟಕ ರಾಜ್ಯ ಮೀಸಲು ಪಡೆಯ ಐಜಿಪಿಯಾಗಿರುವ ಸಂದೀಪ್ ಪಾಟೀಲ್ ಅವರು ರಾಜ್ಯ ಮತ್ತು ಪೊಲೀಸ್ ಇಲಾಖೆಗೆ ಹೆಮ್ಮೆಯುಂಟಾಗುವ ಸಾಧನೆಯೊಂದನ್ನು ಮಾಡಿದ್ದಾರೆ. ವರ್ಲ್ಡ್​ ಟ್ರೈಯಥ್ಲಾನ್ ಕಾರ್ಪೋರೇಷನ್ (World Triathlon Corporation) ಆಯೋಜಿಸುವ ಐರನ್​ನ್ಯಾನ್ ಟ್ರೈಯಥ್ಲಾನ್ ಈವೆಂಟ್​ನಲ್ಲಿ ಭಾಗಿಯಾಗಿ ತಮ್ಮ ಫಿಟ್ನೆಸ್ ಸಾಮರ್ಥ್ಯ ಮತ್ತು ಸಹಿಷ್ಣುತೆಯ ಪರಿಚಯ ನೀಡಿದ್ದಾರೆ. ಡೆನ್ಮಾರ್ಕ್ ರಾಜಧಾನಿ ಕೋಪನ್​ಹೇಗನ್​ನಲ್ಲಿ ನಡೆದ ಐರನ್​ನ್ಯಾನ್ ಟ್ರೈಯಥ್ಲಾನ್ ಸಾಮಾನ್ಯವಾದುದಲ್ಲ, ದೇಹವನ್ನು ತೀವ್ರವಾಗಿ ದಂಡಿಸುವ ಮೂರು ಸ್ಪರ್ಧೆಗಳನ್ನು ಇದು ಒಳಗೊಂಡಿರುತ್ತದೆ. ಸಮುದ್ರದಲ್ಲಿ 3.8 ಕಿಮೀ ಈಜುವುದು, 180 ಕಿಮೀಗಳಷ್ಟು ಸೈಕ್ಲಿಂಗ್ ಮತ್ತು 42 ಕಿಮೀ ಓಟ (ಮ್ಯಾರಥಾನ್); ಎಲ್ಲವನ್ನೂ ಸಂದೀಪ್ ಪಾಟೀಲ್ 14 ಗಂಟೆ 45 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ! ಅವರು ಐರನ್​ಮ್ಯಾನ್ ಅನ್ನೋದಿಕ್ಕೆ ಸಂದೇಹವೇ ಬೇಡ. ಈ ಜಾಗತಿಕ ಈವೆಂಟ್​ನಲ್ಲಿ ಕರ್ನಾಟಕ ಐಪಿಎಸ್ ಕೇಡರ್​ನಿಂದ ಭಾಗವಹಿಸಿದ ಏಕೈಕ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಆಗಿದ್ದಾರೆ.

ಇದನ್ನೂ ಓದಿ:  Independence Day: ಕರ್ನಾಟಕದ ಇಬ್ಬರು ಐಪಿಎಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ, 18 ಪೊಲೀಸರಿಗೆ ವಿಶಿಷ್ಟ ಸೇವಾ ಪದಕ ಘೋಷಣೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ