‘ಕಾಸಿಗೆ ಡಿಗ್ರಿ’ ನೀಡುವ ಬೃಹತ್ ವಂಚನೆ ಜಾಲದ ಬಗ್ಗೆ ವಿಡಿಯೋ ಹಂಚಿಕೊಂಡ ಶಾಸಕ ಸುರೇಶ್ ಕುಮಾರ್
ಕರ್ನಾಟಕದಲ್ಲಿ ಬೃಹತ್ ನಕಲಿ ಪದವಿ ಮತ್ತು ಪ್ರಮಾಣಪತ್ರ ಮಾರಾಟ ಜಾಲ ಸಕ್ರಿಯವಾಗಿದೆ. ಶಾಸಕ ಎಸ್. ಸುರೇಶ್ ಕುಮಾರ್ ಅವರು ಈ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿ, ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನರ್ಸಿಂಗ್, ಎಲ್‌ಎಲ್‌ಬಿ, ಇಂಜಿನಿಯರಿಂಗ್ ಸೇರಿದಂತೆ ಹಲವು ಕೋರ್ಸ್‌ಗಳ ನಕಲಿ ಪದವಿಗಳನ್ನು ಮಾರಾಟ ಮಾಡಲಾಗುತ್ತಿದೆ. ಸಚಿವರ ಸೂಚನೆ ಮೇರೆಗೆ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರು ಇಂತಹ ವಂಚನೆಗಳಿಂದ ದೂರವಿರಲು ಮನವಿ ಮಾಡಲಾಗಿದೆ.
ಬೆಂಗಳೂರು, ಸೆ.25: ರಾಜ್ಯದಲ್ಲಿ ನಕಲಿ ಪದವಿ ಹಾಗೂ ಪ್ರಮಾಣಪತ್ರಗಳನ್ನು ಮಾರಾಟ ಮಾಡುವ ಬೃಹತ್ ವಂಚನೆಯ ಜಾಲ ಸಕ್ರಿಯವಾಗಿರುವ ಬಗ್ಗೆ ಶಾಸಕ ಎಸ್. ಸುರೇಶ್ ಕುಮಾರ್ ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದು, ಈ ಕುರಿತು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ವಿಡಿಯೋವೊಂದನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಧಾನಸೌಧಕ್ಕೆ ತೆರಳುವಾಗ ನಗರದ ರಾಜಾಜಿನಗರ ಸೇರಿದಂತೆ ಹಲವು ಕಡೆಗಳಲ್ಲಿ ಅಂಟಿಸಲಾಗಿದ್ದ ಬಿತ್ತಿಪತ್ರ (ಪೋಸ್ಟರ್) ಒಂದನ್ನು ಗಮನಿಸಿದ್ದಾಗಿ ಸುರೇಶ್ ಕುಮಾರ್ ತಿಳಿಸಿದ್ದಾರೆ. ಆ ಪೋಸ್ಟರ್‌ನಲ್ಲಿ GNM, B.Sc Nursing, LLB, B.Pharmacy, BAMS, BNYS, B.Tech – Fail / Discontinued ಬಿದ್ದವರಿಗೆ ಅಡ್ಮಿಷನ್ ಓಪನ್ (2026-2027) ಎಂದು ಪ್ರಕಟಿಸಿ, ಕೆಳಗೆ ಮೊಬೈಲ್ ಸಂಖ್ಯೆಗಳನ್ನು ನೀಡಲಾಗಿತ್ತು. ಆಯುರ್ವೇದ ವೈದ್ಯಕೀಯ (BAMS), ನರ್ಸಿಂಗ್, ಕಾನೂನು (LLB) ಹಾಗೂ ಇಂಜಿನಿಯರಿಂಗ್ (B.Tech) ನಂತಹ ಅತ್ಯಂತ ಜವಾಬ್ದಾರಿಯುತ ಕೋರ್ಸ್‌ಗಳಿಗೂ ಈ ರೀತಿ ಅನುತ್ತೀರ್ಣರಾದವರಿಗೆ ನೇರ ಡಿಗ್ರಿ ಕೊಡುವ ಆಮೀಷ ಒಡ್ಡಿರುವುದು ತೀವ್ರ ಆಘಾತಕಾರಿ ಎಂದಿದ್ದಾರೆ. ಈ ಪ್ರಕರಣದ ತೀವ್ರತೆಯನ್ನು ಅರಿತ ಸುರೇಶ್ ಕುಮಾರ್ ಅವರು, ತಕ್ಷಣವೇ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಉನ್ನತ ಶಿಕ್ಷಣ ಸಚಿವರ ಅವರ ಗಮನಕ್ಕೆ ತಂದಿದ್ದಾರೆ. ಸಚಿವರು ತಕ್ಷಣವೇ ಸ್ಪಂದಿಸಿ, ಈ ಜಾಲದ ವಿರುದ್ಧ ಪೊಲೀಸ್ ದೂರು (FIR) ದಾಖಲಿಸಲು ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಪ್ರಾರಂಭಿಕ ಪರಿಶೀಲನೆಯಲ್ಲಿ, ಈ ವಂಚನೆ ಜಾಲವು ನೆರೆರಾಜ್ಯದ ಖಾಸಗಿ ಯೂನಿವರ್ಸಿಟಿಯ ಹೆಸರನ್ನು ಬಳಸಿಕೊಂಡು ಸಾರ್ವಜನಿಕರನ್ನು ಮೋಸಗೊಳಿಸುತ್ತಿರುವುದು ಬೆಳಕಿಗೆ ಬಂದಿದೆ. ಕೆಲವು ವರ್ಷಗಳ ಹಿಂದೆ ಐಪಿಎಸ್ ಅಧಿಕಾರಿ ರೂಪಾ ಹಾಗೂ ಹೆಚ್.ಜಿ.ಆರ್. ದತ್ತಾ ಅವರ ಹೆಸರನ್ನು ಬಳಸಿ ಖಾಸಗಿಯಾಗಿ ಗೌರವ ಡಾಕ್ಟರೇಟ್ ಮಾರಾಟ ಮಾಡಲು ಬಂದಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದ್ದ ಘಟನೆಯನ್ನು ಬಗ್ಗೆ ಈ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಆ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಶಾಸಕರು ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ ಅನುತ್ತೀರ್ಣರಾದವರು ಅಥವಾ ಶಿಕ್ಷಣ ಅರ್ಧಕ್ಕೆ ಮೊಟಕುಗೊಳಿಸಿದವರು ಇಂತಹ ಜಾಹೀರಾತುಗಳನ್ನು ನೋಡಿ ಹಣ ನೀಡಿ ಮೋಸ ಹೋಗಬಾರದು. ಅನರ್ಹರು ಹಣ ನೀಡಿ ಪಡೆಯುವ ಇಂತಹ ನಕಲಿ ಪದವಿಗಳಿಂದ ಸಮಾಜಕ್ಕೆ, ವಿಶೇಷವಾಗಿ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ದೊಡ್ಡ ಅನಾಹುತವೇ ಸಂಭವಿಸಬಹುದು ಈ ಕುರಿತು ಪ್ರತಿಯೊಬ್ಬರೂ ಜಾಗೃತರಾಗಿರಬೇಕು ಮತ್ತು ಇಂತಹ ಅಕ್ರಮ ಜಾಲಗಳ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ಸುರೇಶ್ ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ