ರಾಜ್ಯದಲ್ಲಿ ಮುಂದಿನ ವಿಧಾನ ಸಭೆ ಚುನಾವಣೆಗೆ ಇನ್ನೂ ಸಾಕಷ್ಟು ಕಾಲಾವಕಾಶವಿದೆ. ಅದರೆ, ಬಿಜೆಪಿ-ಕಾಂಗ್ರೆಸ್ ಮತ್ತು ಜೆಡಿ(ಎಸ್) ಅದಾಗಲೇ ಸಿದ್ಧತಗಳನ್ನು ಶುರುಮಾಡಿಕೊಂಡಿವೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ ಅವರು ಮೇಕೆದಾಟು ಯೋಜನೆಯನ್ನು ನೆಪವಾಗಿಸಿಕೊಂಡು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಬಿಜೆಪಿ ಮತ್ತು ಜೆಡಿ(ಎಸ್) ಪಕ್ಷಗಳು ಕೆಪಿಸಿಸಿ ಅಧ್ಯಕ್ಷರ ಯೋಜನೆಯನ್ನು ಟೀಕಿಸಲು ಆರಂಭಿಸಿವೆ. ಬುಧವಾರದಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರು, ಶಿವಕುಮಾರ ಅವರ ಪಾದಯಾತ್ರೆಯನ್ನು ಚುನಾವಣಾ ಗಿಮಕ್ ಎಂದು ಬಣ್ಣಿಸಿದರು.
ಕಾಂಗ್ರೆಸ್ ಪಾದಯಾತ್ರೆ ಮಾಡಲಿ ಅಥವಾ ಮತ್ತೇನಾದರೂ ಮಾಡಲಿ ಅದರೆ, ಮುಂದಿನ ಚುನಾವಣೆಯ ನಂತರ ತಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ರವಿಯವರು ಹೇಳಿದರು. ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬರುವ ಹಗಲುಗನಸನ್ನು ಕಾಂಗ್ರೆಸ್ ಪಕ್ಷದ ನಾಯಕರು ಕಾಣುತ್ತಿದ್ದಾರೆ. ಖಾಲಿ ಇಲ್ಲದಿರುವ ಸೀಟಿಗೆ ಟವೆಲ್ ಹಾಕುವ ಪ್ರಯತ್ನವನ್ನು ಆ ಪಕ್ಷದ ನಾಯಕರು ಮಾಡುತ್ತಿದ್ದಾರೆ. ಆ ಟವೆಲ್ ಚುನಾವಣೆ ಮುಗಿದ ನಂತರ ಮುಖ ಒರೆಸಿಕೊಳ್ಳಲು ಮಾತ್ರ ಸಹಾಯವಾಗಲಿದೆಯೇ ಹೊರತು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಅಂತ ಅವರು ಅಂದುಕೊಳ್ಳುತ್ತಿರುವುದು ತಿರುಕನ ಕನಸು ಎಂದು ರವಿ ಹೇಳಿದರು.
ಹಿಂದೆ, 6 ವರ್ಷಗಳ ಕಾಲ ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಮೇಕೆದಾಟು ಯೋಜನೆ ಬಗ್ಗೆ ಯೋಚಿಸದೆ ಕೇವಲ ಮೇಕೆ ತಿನ್ನುವುದರಲ್ಲಿ ಮಾತ್ರ ಅವರು ಮಗ್ನರಾಗಿದ್ದರು, ಅಧಿಕಾರ ಹೋದ ಮೇಲೆ ಅವರಿಗೆ ಯೋಜನೆಯ ನೆನಪಾಗಿದೆ ಎಂದು ಛೇಡಿಸಿದ ರವಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಹೇಳಿದರು.
ಡಿಪಿಅರ್ ತಯಾರಾಗಿದ್ದು ಪರಿಸರ ಇಲಾಖೆಯ ಕ್ಲೀಯರೆನ್ಸ್ ಗಾಗಿ ಕಾಯಲಾಗುತ್ತಿದೆ, ರಾಜ್ಯ ಜನತೆಯ ಹಿತರಕ್ಷಣೆಗೆ ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ: Divya Suresh: ನೈಟ್ ಕರ್ಫ್ಯೂ ವೇಳೆ ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಕಿರಿಕ್?; ವಿಡಿಯೋ ಇಲ್ಲಿದೆ