ದೆಹಲಿಯಲ್ಲಿ ಡಿಕೆ ಸಹೋದರರ ಬಿಗಿ ಪಟ್ಟು: ಮೇ ಮೊದಲ ವಾರವೇ ದೊಡ್ಡ ಬೆಳವಣಿಗೆ ಸಾಧ್ಯತೆ?

Edited By:

Updated on: Apr 25, 2026 | 11:34 AM

ಕರ್ನಾಟಕ ರಾಜಕಾರಣದಲ್ಲಿ ಮೇ ಮೊದಲ ವಾರದಲ್ಲಿ ದೊಡ್ಡ ಹೈಡ್ರಾಮಾ ನಡೆಯುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ದೆಹಲಿಗೆ ಭೇಟಿ ನೀಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರೊಂದಿಗೆ ಒಂದುವರೆ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿ ಬಣ ಕೂಡ ಸಕ್ರಿಯವಾಗಿದ್ದು, ಮುಂದಿನ ನಡೆ ಕುರಿತು ಚರ್ಚೆ ನಡೆಯುತ್ತಿದೆ.

ನವದೆಹಲಿ, ಏಪ್ರಿಲ್ 25: ಕರ್ನಾಟಕ ರಾಜ್ಯ ರಾಜಕಾರಣದ ಪ್ರಮುಖ ಬೆಳವಣಿಗೆಯೊಂದರಲ್ಲಿ, ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ. ‘ಕೇವಲ ಗಾಳಿ ಸೇವನೆಗೆ ಇಲ್ಲಿಗೆ ಬಂದಿಲ್ಲ’ ಎಂದು ಡಿಕೆ ಶಿವಕುಮಾರ್ ಹೇಳಿರುವ ಮಾತು, ಅವರ ಭೇಟಿಯ ಹಿಂದಿನ ರಾಜಕೀಯ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಮೇ ಮೊದಲ ವಾರದಲ್ಲಿ ಕೆಲವು ಪ್ರಮುಖ ನಿರ್ಧಾರಗಳು ಹೊರಬರಬಹುದು. ರಾಜ್ಯ ನಾಯಕರನ್ನು ಹೈಕಮಾಂಡ್ ದೆಹಲಿಗೆ ಕರೆದು ಮಾತುಕತೆ ನಡೆಸಬಹುದು ಎಂದು ಡಿಕೆ ಸಹೋದರರು ನಿರೀಕ್ಷಿಸುತ್ತಿದ್ದಾರೆ ಎನ್ನಲಾಗಿದೆ. ಆ ಭೇಟಿಯ ಪೂರ್ವಭಾವಿಯಾಗಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಿದ್ದಾರೆ. ಒಂದು ಕಡೆ ಸರ್ಕಾರಿ ಕೆಲಸಗಳ ನೆಪದಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದರೂ, ಅವರ ಮುಖ್ಯ ಉದ್ದೇಶ ಪಕ್ಷದ ಹಿರಿಯ ನಾಯಕರೊಂದಿಗೆ ಮಾತುಕತೆ ನಡೆಸಿ ತಮ್ಮ ಹಕ್ಕೊತ್ತಾಯವನ್ನು ಗಟ್ಟಿಗೊಳಿಸುವುದಾಗಿದೆ ಎಂದು ಮೂಳಗಳು ತಿಳಿಸಿವೆ.

ಸಂಪುಟ ವಿಸ್ತರಣೆ ಅಥವಾ ಪುನರಚನೆಗಿಂತ ಮೊದಲು ನಾಯಕತ್ವ ಬದಲಾವಣೆ ಮತ್ತು ಅಧಿಕಾರ ಹಂಚಿಕೆ ಆಗಬೇಕು ಎಂಬ ಪ್ರಸ್ತಾಪವನ್ನು ಡಿಕೆ ಬಣ ಮುಂದಿಡುತ್ತಿದೆ. ಇತ್ತ ಸಿಎಂ ಬಣ ಕೂಡ ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಹೈಕಮಾಂಡ್ ಕರೆದರೆ ಮುಂದಿನ ತಂತ್ರಗಾರಿಕೆ ಏನು ಎಂಬುದರ ಬಗ್ಗೆ ಸಿದ್ಧತೆ ನಡೆಸುತ್ತಿದೆ. ಮೇ ಮೊದಲ ವಾರದ ಬಳಿಕ ರಾಜ್ಯ ರಾಜಕಾರಣ ದೆಹಲಿಗೆ ಶಿಫ್ಟ್‌ ಆಗುವ ಎಲ್ಲ ಸಾಧ್ಯತೆಗಳಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Apr 25, 2026 11:33 AM
Follow Us