ಕರ್ನಾಟಕ ಸ್ಟಿಂಗ್ ಪ್ರಕರಣ: ಸಿಸಿಬಿಗೆ ಇನ್ನೂ ಸಿಕ್ಕಿಲ್ಲ 2 ಮದರ್ ಡಿವೈಸ್, ಮೊಬೈಲ್!
ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಸಿಸಿಬಿ ಪೊಲೀಸರಿಗೆ ಸ್ಟಿಂಗ್‌ಗೆ ಬಳಸಿದ ಎರಡು ಪ್ರಮುಖ ಮದರ್ ಡಿವೈಸ್‌ಗಳು ಇನ್ನೂ ಪತ್ತೆಯಾಗಿಲ್ಲ. ವಿಡಿಯೋ ರೆಕಾರ್ಡ್ ಮಾಡಿದ್ದ ಆರೋಪ ಹೊತ್ತಿರುವ ಪ್ರಶಾಂತ್, ತನಗೆ ಏನೂ ಗೊತ್ತಿಲ್ಲ ಎಂದು ನಾಲ್ಕು ಬಾರಿ ವಿಚಾರಣೆ ನಡೆಸಿದರೂ ಅದೇ ಉತ್ತರ ನೀಡುತ್ತಿದ್ದಾನೆ. ಡಿವೈಸ್‌ಗಳು ಸಿಗದಿದ್ದರೆ ಪ್ರಕರಣಕ್ಕೆ ಹಿನ್ನಡೆಯಾಗುವ ಸಾಧ್ಯತೆಯಿದೆ.
ಬೆಂಗಳೂರು, ಅಕ್ಟೋಬರ್ 27: ಸ್ಟಿಂಗ್ ಕಾರ್ಯಾಚರಣೆ ಪ್ರಕರಣದ ತನಿಖೆ ಸಿಸಿಬಿ ಪೊಲೀಸರಿಂದ ತೀವ್ರಗೊಂಡಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖವಾದ ಎರಡು ಮದರ್ ಡಿವೈಸ್‌ಗಳು ಇದುವರೆಗೂ ಪತ್ತೆಯಾಗಿಲ್ಲ. ಸ್ಟಿಂಗ್ ರೆಕಾರ್ಡಿಂಗ್‌ಗೆ ಬಳಸಿದ ಮೊಬೈಲ್ ಮತ್ತು ಕ್ಯಾಮೆರಾ ಹಾಗೂ ಅದನ್ನು ಅಪ್‌ಲೋಡ್ ಮಾಡಲು ಬಳಸಿದ ಫೋನ್ ಈ ಎರಡು ಡಿವೈಸ್‌ಗಳಲ್ಲಿ ಸೇರಿವೆ. ಈ ಪ್ರಕರಣದಲ್ಲಿ ಪ್ರಶಾಂತ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ನಾಲ್ಕು ಬಾರಿ ವಿಚಾರಣೆಗೊಳಪಡಿಸಿದ್ದಾರೆ. ಆದರೆ, ಆತ ಪ್ರತಿ ಬಾರಿಯೂ ತನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ, ನಾನು ಸ್ಟಿಂಗ್ ಮಾಡಿಲ್ಲ ಎಂದು ನಿರಾಕರಿಸುತ್ತಿದ್ದಾನೆ. ಆತನ ಹೇಳಿಕೆಗಳಿಂದಾಗಿ ತನಿಖೆಗೆ ಹಿನ್ನಡೆಯಾಗಿದೆ.
ಪ್ರಕರಣದಲ್ಲಿ ಆರೋಪ ವ್ಯಕ್ತವಾಗಿರುವ ಪತ್ರಕರ್ತರನ್ನೂ ಆರು ಬಾರಿ ವಿಚಾರಣೆಗೆ ಒಳಪಡಿಸಲಾಗಿದೆ. ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸುವಾಗ ಈ ಡಿವೈಸ್‌ಗಳು ಸಿಗದಿದ್ದರೆ, ಪ್ರಕರಣಕ್ಕೆ ದೊಡ್ಡ ತೊಡಕಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಡಿವೈಸ್‌ಗಳ IMEI ಸಂಖ್ಯೆಗಳಂತಹ ತಾಂತ್ರಿಕ ವಿವರಗಳನ್ನು ಪೊಲೀಸರು ಸಂಗ್ರಹಿಸಿದ್ದರೂ, ಭೌತಿಕ ಡಿವೈಸ್‌ಗಳ ಪತ್ತೆ ಅನಿವಾರ್ಯವಾಗಿದೆ. ತನಿಖೆ ಮುಂದುವರಿದಿದ್ದು, ಡಿವೈಸ್‌ಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.
ಸ್ಟಿಂಗ್ ಕಾರ್ಯಾಚರಣೆಗಾಗಿ ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿ ಮಾಡಿ ಆರೋಪಿಗಳಿಗೆ ನೀಡಿದ್ದ ದೆಹಲಿ ಮೂಲದ ರಿತೇಶ್ ಪಾಂಡೆ ಎಂಬಾತನನ್ನು ಆರಂಭದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು. ನಂತರ ಆತನಿಗೆ ಜಾಮೀನು ದೊರೆತಿತ್ತು. ಸದ್ಯ ಆತನಿಂದ ಮತ್ತು ಇತರರ ವಿಚಾರಣೆಯಿಂದ ತಿಳಿದುಬಂದ ವಿಚಾರಗಳ ಅನ್ವಯ ತನಿಖೆ ನಡೆಯುತ್ತಿದೆ. ಆದರೆ, ಮೊಬೈಲ್ ಹಾಗೂ ಮದರ್ ಡಿವೈಸ್‌ಗಳು ದೊರೆಯದೇ ಇರುವುದು ತನಿಖೆಗೆ ಹಿನ್ನಡೆಯಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
