ಈರುಳ್ಳಿ ‘ಖಾರ’ಕ್ಕೆ ಜನಸಾಮಾನ್ಯರು ಕಂಗಾಲು: ಹಬ್ಬಗಳ ಹೊತ್ತಲ್ಲೇ ಕೆಜಿಗೆ 70 ರೂ. ಗಡಿ ದಾಟಿದ ದರ
ರಾಜ್ಯದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ವಿಜಯಪುರದಲ್ಲಿ ಪ್ರತಿ ಕೆಜಿಗೆ 60-70 ರೂಪಾಯಿ ತಲುಪಿದೆ. ಬರಗಾಲ ಮತ್ತು ಮಳೆ ಕೊರತೆಯಿಂದ ಈರುಳ್ಳಿ ಬಿತ್ತನೆ ಪ್ರದೇಶ ಕುಸಿದು ಇಳುವರಿ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ಜನಸಾಮಾನ್ಯರು, ವಿಶೇಷವಾಗಿ ಕೂಲಿಕಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ದಾವಣಗೆರೆಯಲ್ಲೂ ಉತ್ತಮ ಗುಣಮಟ್ಟದ ಈರುಳ್ಳಿಗೆ 58 ರೂಪಾಯಿ ದರ ಇದೆ.
ವಿಜಯಪುರ, ಸೆ.7: ರಾಜ್ಯದಲ್ಲಿ ಸಾಲು ಸಾಲು ಹಬ್ಬಗಳ ನಡುವೆ ಈರುಳ್ಳಿ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರ ಕಣ್ಣಿನಲ್ಲಿ ನೀರು ತರಿಸುತ್ತಿದೆ. ವಿಜಯಪುರ ಮಾರ್ಕೆಟ್‌ನಲ್ಲಿ ಪ್ರತಿ ಕೆಜಿ ಈರುಳ್ಳಿ ದರ 60 ರಿಂದ 70 ರೂಪಾಯಿಗೆ ಮಾರಾಟವಾಗುತ್ತಿದೆ. ಈರುಳ್ಳಿ ಕೊಳ್ಳುವಾಗಲೇ ಕಣ್ಣೀರು ಹಾಕುವ ಪರಿಸ್ಥಿತಿ ಬಂದಿದೆ ಎಂದು ಗ್ರಾಹಕರು ಅಲವತ್ತುಕೊಂಡಿದ್ದಾರೆ. ಈ ಬೆಲೆ ಏರಿಕೆಗೆ ಮುಖ್ಯ ಕಾರಣವೆಂದರೆ ಬರಗಾಲ ಮತ್ತು ಮುಂಗಾರು ಮಳೆಯ ಕೊರತೆ. ವಿಜಯಪುರ ಜಿಲ್ಲೆಯಲ್ಲಿ ಸಾಮಾನ್ಯವಾಗಿ 20 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಗುರಿ ಹೊಂದಲಾಗುತ್ತಿತ್ತು. ಆದರೆ, ಮಳೆ ಇಲ್ಲದ ಕಾರಣ ಕೇವಲ 10 ರಿಂದ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ. ಬಿತ್ತನೆ ಮಾಡಿದ ಬೆಳೆ ಕೂಡ ಬರಗಾಲದಿಂದಾಗಿ ಫಸಲು ಬಾರದಂತಾಗಿ ಹಾಳಾಗಿದೆ. ಮಾರುಕಟ್ಟೆಗೆ ಈರುಳ್ಳಿ ಪೂರೈಕೆ ಕಡಿಮೆಯಾಗಿರುವುದರಿಂದ ಬೆಲೆ ಏರುತ್ತಲೇ ಇದೆ. ದಾವಣಗೆರೆಯಲ್ಲೂ ಈರುಳ್ಳಿ ದರ ಏರಿಕೆಯಾಗಿದ್ದು, ಉತ್ತಮ ಗುಣಮಟ್ಟದ ಈರುಳ್ಳಿಗೆ ಕೆಜಿಗೆ 58 ರೂಪಾಯಿ ದಾಖಲಾಗಿದೆ. ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಈರುಳ್ಳಿ ಇಳುವರಿ ಕುಸಿದಿರುವುದೇ ಇದಕ್ಕೆ ಕಾರಣ. ಮಹಾರಾಷ್ಟ್ರದ ನಾಸಿಕ್ ಈರುಳ್ಳಿಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಉಂಟಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
