ಕೊಪ್ಪಳ: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ನಾಲ್ಕು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ ಸಂಪೂರ್ಣ ಬೆಂಕಿಗಾಹುತಿ
ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿರುವ ಕೆ.ಜೆ.ಪಿ ಜ್ಯುವೆಲ್ಲರಿ ಶಾಪ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಜ್ಯುವೆಲ್ಲರಿ ಶಾಪ್ಗೆ ಬೆಂಕಿ ತಗುಲಿ ಅಪಾರ ಮೌಲ್ಯದ ಚಿನ್ನಾಭರಣ, ವಸ್ತು ನಾಶವಾಗಿದೆ. ಅಗ್ನಿಶಾಮಕದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಘಟನೆ ನಡೆದಿದೆ.
ಕೊಪ್ಪಳ, ಡಿ.02: ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಜ್ಯುವೆಲ್ಲರಿ ಶಾಪ್ಗೆ (Jewellery shop) ಬೆಂಕಿ ತಗುಲಿ ಅಪಾರ ಮೌಲ್ಯದ ಚಿನ್ನಾಭರಣ, ವಸ್ತು ನಾಶವಾದ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿ ನಗರದಲ್ಲಿರುವ ಕೆ.ಜೆ.ಪಿ ಜ್ಯುವೆಲ್ಲರಿ ಶಾಪ್ನಲ್ಲಿ ಸಂಭವಿಸಿದೆ. ನೋಡು ನೋಡುತ್ತಿದ್ದಂತಯೇ ಬೆಂಕಿಯ ಕೆನ್ನಾಲೆಗೆ ನಾಲ್ಕು ಅಂತಸ್ತಿನ ಕಟ್ಟಡ ಸಂಪೂರ್ಣ ಹೊತ್ತಿ ಉರಿದಿದೆ (Building Fire). ಸದ್ಯ ಅಗ್ನಿಶಾಮಕದಳ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದ್ದು ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡರಾತ್ರಿ ಘಟನೆ ನಡೆದಿದೆ.
ಗಂಗಾವತಿ ಪಟ್ಟಣದ ಗಣೇಶ ವೃತ್ತದಲ್ಲಿರುವ ಸುಪ್ರಸಿದ್ದ ಕೆಜಿಪಿ ಚಿನ್ನಾಭರಣ ಅಂಗಡಿಯಲ್ಲಿ ಕಳೆದ ರಾತ್ರಿ ಅಗ್ನಿ ಅವಘಡ ಉಂಟಾಗಿದೆ. ರಾತ್ರಿ ಹತ್ತು ಗಂಟೆ ಸಮಯದಲ್ಲಿ ಅಂಗಡಿಯ ಸಿಬ್ಬಂದಿ ಅಂಗಡಿಯನ್ನು ಬಂದ್ ಮಾಡಿಕೊಂಡು ಮನೆಗೆ ಹೋಗಿ ಮಲಗಿದ್ದರು. ಆದ್ರೆ ರಾತ್ರಿ ಹನ್ನೊಂದು ಗಂಟೆ ಮೂವತ್ತು ನಿಮಿಷದ ಸಮಯದಲ್ಲಿ ಅಂಗಡಿಯಿಂದ ಹೊಗೆ ಬರಲು ಆರಂಭವಾಗಿದೆ. ಏನಾಗಿದೆ ಅಂತ ನೋಡನೋಡುತ್ತಿದ್ದಂತೆ, ಕಟ್ಟಡದ ನಾಲ್ಕು ಮಹಡಿಯಿಂದ ಬೆಂಕಿ ಹೊತ್ತಿ ಉರಿಯಲು ಆರಂಭವಾಗಿದೆ. ಇನ್ನು ಕೆಜೆಪಿ ಅಂಗಡಿಯಿರೋದು ಜನನಿಬಿಡ ಪ್ರದೇಶದಲ್ಲಿ. ಸುತ್ತಮುತ್ತ ಅನೇಕ ಮನೆಗಳು, ವಿವಿಧ ಕಿರಾಣಿ ಅಂಗಡಿಗಳಿದ್ದವು. ಹೀಗಾಗಿ ಜನ ಆತಂಕದಿಂದ ಹೊರಬಂದಿದ್ದಾರೆ. ಮತ್ತೊಂದಡೆ ಬೆಂಕಿ ಕಡಿಮೆಯಾಗುವ ಬದಲು ಹೆಚ್ಚಾಗಿದೆ. ಅನೇಕ ವಸ್ತುಗಳು ಮುಂದೆಯೇ ಸುಟ್ಟು ಕೆಳಗೆ ಬೀಳುತ್ತಿರುವದನ್ನು ನೋಡಿ ಜನ ಗಾಬರಿಗೊಂಡಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದ ಅಗ್ನಿಶಾಮಕ ಸಿಬ್ಬಂದಿ ರಾತ್ರಿ ಹನ್ನೆರಡು ಗಂಟೆಯಿಂದ ಬೆಂಕಿ ನಂದಿಸುವ ಕೆಲಸ ಆರಂಭಿಸಿದ್ದಾರೆ. ಮೊದಲು ಇಡೀ ಏರಿಯಾದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ನಂತರ ಗಂಗಾವತಿ, ಕಾರಟಗಿ ಸೇರಿದಂತೆ ಸುತ್ತಮುತ್ತಲಿನ ಅಗ್ನಿಶಾಮಕ ವಾಹನಗಳನ್ನು ತರಿಸಿ ಬೆಂಕಿ ನಂದಿಸುವ ಕೆಲಸ ಆರಂಭಿಸಿದ್ದಾರೆ. ಆದ್ರೆ ಬೆಂಕಿ ತೀರ್ವವಾಗಿದ್ದರಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ರಾತ್ರಿ ಹನ್ನೆರಡು ಗಂಟೆಯಿಂದ ಮುಂಜಾನೆ ಎಂಟು ಗಂಟೆವರಗೆ ಕಾರ್ಯಾಚಾರಣೆ ನಡೆಸಿದ ಇಪ್ಪತ್ತೈದಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಇನ್ನು ಬೆಂಕಿಯ ಕೆನ್ನಾಲಗೆಗೆ ಸಿಕ್ಕು, ಅಂಗಡಿಯಲ್ಲಿದ್ದ ಬಹುತೇಕ ವಸ್ತುಗಳು ಸುಟ್ಟು ಕರಕಲಾಗಿವೆ. ನೆಲ ಮಹಡಿ, ಮತ್ತು ಮೊದಲ ಮಹಡಿಯಲ್ಲಿ ಚಿನ್ನಾಭರಣ ಇದ್ರೆ, ಎರಡನೇ ಮಹಡಿಯಲ್ಲಿ ಬಟ್ಟೆ ಇದ್ದವು. ನಾಲ್ಕನೆ ಮಹಡಿಯಲ್ಲಿ ಅನೇಕ ಗುಜರಿ ವಸ್ತುಗಳನ್ನು ಇಡಲಾಗಿತ್ತಂತೆ. ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿದ್ದರಿಂದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ಆದರೂ ಕೂಡಾ ಅಗ್ನಿಶಾಮಕ ಸಿಬ್ಬಂದಿ ಐವತ್ತು ಟ್ಯಾಂಕ್ ಗೂ ಹೆಚ್ಚು ನೀರನ್ನು ಬಳಸಿ ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದಾರೆ. ಇನ್ನು ಹುಬ್ಬಳಿ ಮೂಲದ ಗಣೇಶ್ ಅನ್ನೋರಿಗೆ ಸೇರಿದೆ ಕೆಜಿಪಿ ಚಿನ್ನಾಭರಣ, ವಜ್ರ, ಮತ್ತು ಬಟ್ಟೆ ಅಂಗಡಿ ಇದಾಗಿದ್ದು, ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಕೆಜಿಪಿ ಬ್ರ್ಯಾಂಚ್ ಗಳಿವೆ. ಇನ್ನು ಕೆಜಿಪಿ ಅಂಗಡಿಯಲ್ಲಿ ಅಗ್ನಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಅಂತ ಹೇಳಲಾಗುತ್ತಿದೆ. ಆದರೆ ಶಾರ್ಟ್ ಸರ್ಕ್ಯೂಟ್ ಆಗಿದ್ದು ಎಲ್ಲಿ, ಮೊದಲು ಬೆಂಕಿ ಹೊತ್ತಿಕೊಂಡಿದ್ದು ಎಲ್ಲಿ ಅನ್ನೋದು ಮಾತ್ರ ಇನ್ನು ಗೊತ್ತಾಗಿಲ್ಲಾ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ