ಕೆಪಿಎಸ್‌ಸಿ ನೇಮಕಾತಿ ಅಕ್ರಮ: ಟಿವಿ9 ವರದಿ ಬೆನ್ನಲ್ಲೇ 70 ಆರ್‌ಟಿಓ ಇನ್ಸ್‌ಪೆಕ್ಟರ್ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ
ಕೆಪಿಎಸ್‌ಸಿ ನೇಮಕಾತಿ ಅಕ್ರಮದಲ್ಲಿ ಆರ್‌ಟಿಓ ಇನ್ಸ್‌ಪೆಕ್ಟರ್ ಹುದ್ದೆಗಳ ಡೀಲ್ ಸಹ ಬಯಲಾಗಿದೆ. ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ತನಿಖೆ ವೇಳೆ, ಆರೋಪಿ ಬಸವರಾಜ್ ಕನ್ನಾಳೆ 1400 ಅಭ್ಯರ್ಥಿಗಳನ್ನು ಸಂಪರ್ಕಿಸಿ ಹಣಕ್ಕಾಗಿ ಡೀಲ್ ಕುದುರಿಸಿದ್ದ ಎಂಬುದು ತಿಳಿದುಬಂದಿದೆ. ಖಾಲಿ ಚೆಕ್‌ಗಳಿಗೆ ಸಹಿ ಪಡೆದು ಭ್ರಷ್ಟಾಚಾರ ನಡೆಸಿರುವುದು ಇಡಿ ತನಿಖೆಯಿಂದ ಬಹಿರಂಗವಾಗಿದೆ.
ಬೆಂಗಳೂರು, ಅಕ್ಟೋಬರ್ 3: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನೇಮಕಾತಿ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿವೆ. ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ನಡೆದ ಅಕ್ರಮಗಳ ತನಿಖೆಯು ಆರ್‌ಟಿಓ ಇನ್ಸ್‌ಪೆಕ್ಟರ್ ಹುದ್ದೆಗಳಲ್ಲೂ ನಡೆದಿರುವ ಹಗರಣವನ್ನು ಬೆಳಕಿಗೆ ತಂದಿರುವ ಬಗ್ಗೆ ‘ಟಿವಿ9’ ಇತ್ತೀಚೆಗೆ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಬರೋಬ್ಬರಿ 70 ಆರ್‌ಟಿಓ ಇನ್ಸ್‌ಪೆಕ್ಟರ್ ಹೆಚ್ಚುವರಿ ಆಯ್ಕೆ ಪಟ್ಟಿಗೆ ತಡೆ ನೀಡಲಾಗಿದೆ. ಈ ಹುದ್ದೆಗಳು ಬರೋಬ್ಬರಿ 2 ಕೋಟಿ ರೂ.ಗೆ ಡೀಲ್ ಆಗಿದ್ದವು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿತ್ತು.
ಅಕ್ರಮಗಳ ಪ್ರಮುಖ ರೂವಾರಿ ಬಸವರಾಜ್ ಕನ್ನಾಳೆ 1400ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಸಂಪರ್ಕಿಸಿ ಹಣಕ್ಕಾಗಿ ಡೀಲ್ ಕುದುರಿಸಿದ್ದ. 70-80 ಲಕ್ಷ ರೂ.ಗೆ ಡೀಲ್ ಮಾಡಿಕೊಳ್ಳಲಾಗಿದ್ದು, ಅಭ್ಯರ್ಥಿಗಳಿಂದ ಖಾಲಿ ಚೆಕ್‌ಗಳಿಗೆ ಸಹಿ ಪಡೆದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಇಡಿ ಅಧಿಕಾರಿಗಳು ಕೆಪಿಎಸ್‌ಸಿ ಕಚೇರಿಯಲ್ಲಿ ತಲಾಶ್ ನಡೆಸಿ, ಪ್ರಾಮಿಸರಿ ನೋಟ್ ಮತ್ತು ಖಾಲಿ ಚೆಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಕೆಪಿಎಸ್‌ಸಿ ಕಾರ್ಯದರ್ಶಿ ಕೆ. ಜ್ಯೋತಿ ಅವರ ಸೂಚನೆ ಮೇರೆಗೆ 70 ಆರ್‌ಟಿಓ ಇನ್ಸ್‌ಪೆಕ್ಟರ್‌ಗಳ ಆಯ್ಕೆ ಪಟ್ಟಿಗೆ ತಡೆ ನೀಡಲಾಗಿದ್ದು, ಹಗರಣದ ಸಂಪೂರ್ಣ ವಿವರ ಆಳವಾದ ತನಿಖೆಯಿಂದ ಬಯಲಾಗಬೇಕಿದೆ.
ಟಿವಿ9 ಮಾಡಿದ್ದ ವರದಿ ಓದಲು: ಕೆಪಿಎಸ್‌ಸಿ ಆರ್ಟಿಒ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲೂ ಅಕ್ರಮದ ವಾಸನೆ: ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ, ಹಣದ ಲೆಕ್ಕ!
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
