AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಪಿಎಸ್​ಸಿ ಆರ್​ಟಿಒ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲೂ ಅಕ್ರಮದ ವಾಸನೆ: ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ, ಹಣದ ಲೆಕ್ಕ!

ಕೆಪಿಎಸ್​ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯಲ್ಲಿ ಆರ್​ಟಿಒ ಇನ್ಸ್‌ಪೆಕ್ಟರ್ ನೇಮಕಾತಿಗೂ ಸಂಬಂಧಿಸಿದ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಬಸವರಾಜ್ ಕನ್ನಾಳೆ ಡೈರಿಯಲ್ಲಿ ಎಂಟು ಅಭ್ಯರ್ಥಿಗಳ ಹೆಸರು ಹಾಗೂ ಬಾಕಿ ಹಣದ ಲೆಕ್ಕ ಪತ್ತೆಯಾಗಿದೆ. ಆರ್​ಟಿಒ ಇನ್ಸ್‌ಪೆಕ್ಟರ್ ಹುದ್ದೆಗಾಗಿ ಹಣ ನೀಡಿರುವ ಆರೋಪಗಳ ಕುರಿತು ಸದ್ಯ ಸಿಐಡಿ ತನಿಖೆ ಮುಂದುವರಿಸಿದೆ.

ಕೆಪಿಎಸ್​ಸಿ ಆರ್​ಟಿಒ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲೂ ಅಕ್ರಮದ ವಾಸನೆ: ಕನ್ನಾಳೆ ಡೈರಿಯಲ್ಲಿ ಸಿಕ್ತು ಸ್ಫೋಟಕ ಮಾಹಿತಿ, ಹಣದ ಲೆಕ್ಕ!
ಆರ್​ಟಿಒ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲೂ ಅಕ್ರಮದ ವಾಸನೆImage Credit source: tv9
ಕಿರಣ ಹೆಚ್​. ವಿ.
| Edited By: |

Updated on:Sep 30, 2026 | 10:49 AM

Share

ಮುಖ್ಯಾಂಶಗಳು

  • ಕನ್ನಾಳೆ ಡೈರಿಯಲ್ಲಿ ಆರ್​ಟಿಒ ಇನ್ಸ್‌ಪೆಕ್ಟರ್‌ಗಳ ಲೆಕ್ಕ!
  • ಎಂಟು ಅಭ್ಯರ್ಥಿಗಳ ಹೆಸರು, ಬಾಕಿ ಹಣ ಪತ್ತೆ
  • ಆರ್​ಟಿಒ ಇನ್ಸ್‌ಪೆಕ್ಟರ್ ಹುದ್ದೆಗಾಗಿ ಹಣ ನೀಡಿದ ಆರೋಪ ಕುರಿತು ಸಿಐಡಿ ತನಿಖೆ

ಬೆಂಗಳೂರು, ಸೆಪ್ಟೆಂಬರ್ 30: ಕೆಪಿಎಸ್​ಸಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಪಶುವೈದ್ಯಾಧಿಕಾರಿ, ಕೆಎಎಸ್ ಹಾಗೂ ಎಇಇ ನೇಮಕಾತಿ ಅಕ್ರಮಗಳ ಬೆನ್ನಲ್ಲೇ ಆರ್​ಟಿಒ ಇನ್ಸ್‌ಪೆಕ್ಟರ್‌ಗಳ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಸಿಐಡಿ ತನಿಖೆ ವೇಳೆ ಆರೋಪಿ ಬಸವರಾಜ್ ಕನ್ನಾಳೆ ಅವರ ಡೈರಿಯಲ್ಲಿ ಆರ್​ಟಿಒ ಇನ್ಸ್‌ಪೆಕ್ಟರ್‌ಗಳ ಹೆಸರಿನೊಂದಿಗೆ ಬಾಕಿ ಹಣದ ಲೆಕ್ಕ ಪತ್ತೆಯಾಗಿದೆ.

2016ರಲ್ಲಿ ನಡೆದಿದ್ದ ಆರ್​ಟಿಒ ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿ ಪರೀಕ್ಷೆ

2016ರಲ್ಲಿ 150 RTO ಇನ್ಸ್‌ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಪರೀಕ್ಷೆ ನಡೆದಿತ್ತು. ಪರೀಕ್ಷೆ ಬಳಿಕ 150 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ಆದರೆ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಉಳಿದ ಅಭ್ಯರ್ಥಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. 2025ರಲ್ಲಿ ನ್ಯಾಯಾಲಯವು ಆಯ್ಕೆಯಾಗಿದ್ದ ಅಭ್ಯರ್ಥಿಗಳ ನೇಮಕಾತಿ ಸರಿ ಎಂದು ಆದೇಶಿಸಿತ್ತು. ಇದರ ಬಳಿಕ ಕೆಪಿಎಸ್​​ಸಿ 80 ಅಭ್ಯರ್ಥಿಗಳ ನೇಮಕಾತಿ ಪಟ್ಟಿಯನ್ನು ಪ್ರಕಟಿಸಿತ್ತು. ಈ ಪೈಕಿ ಆಯ್ಕೆಯಾದವರು ಸದ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕೆಪಿಎಸ್​ಸಿ ಅಕ್ರಮದ ತನಿಖೆಗೆ ಮಹತ್ವದ ತಿರುವು

ಇದೀಗ ಆರ್​ಟಿಒ ಇನ್ಸ್‌ಪೆಕ್ಟರ್ ನೇಮಕಾತಿಗೆ ಸಂಬಂಧಿಸಿದಂತೆ ಕನ್ನಾಳೆ ಡೈರಿಯಲ್ಲಿ ಹಣದ ಲೆಕ್ಕ ಪತ್ತೆಯಾಗಿರುವುದು ತನಿಖೆಗೆ ಮಹತ್ವದ ತಿರುವು ನೀಡಿದೆ. ಎಂಟು ಅಭ್ಯರ್ಥಿಗಳ ಹೆಸರು ಹಾಗೂ ಅವರಿಂದ ಬರಬೇಕಿದ್ದ ಬಾಕಿ ಹಣದ ವಿವರಗಳು ಡೈರಿಯಲ್ಲಿ ದಾಖಲಾಗಿವೆ.

ಕನ್ನಾಳೆ ಡೈರಿಯಲ್ಲಿ ಯಾವೆಲ್ಲ ಇನ್​ಸ್ಪೆಕ್ಟರ್​ಗಳ ಹೆಸರಿತ್ತು?

ಕನ್ನಾಳೆ ಡೈರಿಯಲ್ಲಿ ದಾಖಲಾಗಿರುವ ವಿವರಗಳ ಪ್ರಕಾರ, ಗೋವರ್ಧನ್ ಹೆಸರಿನ ಎದುರು 5 ಲಕ್ಷ ರೂಪಾಯಿ, ಲಕ್ಕಿ ಹರೀಶ್ 10 ಲಕ್ಷ, ಪದ್ಮಾವತಿ 10 ಲಕ್ಷ, ಮಂಜುನಾಥ್ 10 ಲಕ್ಷ, ಪೂಜಾ 10 ಲಕ್ಷ, ಅಶ್ವಿನ್ ಕುಮಾರ್ 10 ಲಕ್ಷ, ಮೋಹನ್ ಕುಮಾರ್ 5 ಲಕ್ಷ ಹಾಗೂ ಸಂಗಮೇಶ್ ಹೆಸರಿನ ಎದುರು 10 ಲಕ್ಷ ರೂಪಾಯಿ ಬಾಕಿ ಎಂದು ನಮೂದಿಸಲಾಗಿದೆ. ಈ ಹಣದ ಲೆಕ್ಕಾಚಾರ ಸಿಐಡಿ ತನಿಖಾಧಿಕಾರಿಗಳ ಗಮನಕ್ಕೆ ಬಂದಿದ್ದು, RTO ಇನ್ಸ್‌ಪೆಕ್ಟರ್ ಹುದ್ದೆಗಾಗಿ ಅಭ್ಯರ್ಥಿಗಳು ತಲಾ 2 ಕೋಟಿ ರೂಪಾಯಿ ನೀಡಿರುವ ಆರೋಪದ ಬಗ್ಗೆ ತನಿಖೆಯಲ್ಲಿ ಮಾಹಿತಿ ಸಿಕ್ಕಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಈ ಆರೋಪಗಳ ಕುರಿತು ಸಿಐಡಿ ತನಿಖೆ ಮುಂದುವರಿಸಿದೆ.

ಇನ್ನು, ಮೆಡಿಕಲ್ ಟೆಸ್ಟ್‌ನಲ್ಲಿ ಅನುತ್ತೀರ್ಣರಾಗಿದ್ದ ಪೂಜಾ ಅವರಿಗೆ ಆರ್​ಟಿಒ ಇನ್ಸ್‌ಪೆಕ್ಟರ್ ಹುದ್ದೆ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಅರ್ಹತೆ ಇಲ್ಲದಿದ್ದರೂ ಮಂಜುನಾಥ್ ಅವರಿಗೆ ಹುದ್ದೆ ನೀಡಲಾಗಿದೆ ಎಂಬ ಆರೋಪವೂ ಇದೆ.

ಆರ್​​ಟಿಒ ಇನ್ಸ್‌ಪೆಕ್ಟರ್‌ಗಳಿಗೂ ತನಿಖೆಯ ಭೀತಿ

2016ರಲ್ಲಿ ನಡೆದ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದ 150 ಅಭ್ಯರ್ಥಿಗಳ ಪೈಕಿ 80 ಮಂದಿಯ ನೇಮಕಾತಿ ನಡೆದಿದ್ದು, ಉಳಿದ 70 ಅಭ್ಯರ್ಥಿಗಳ ನೇಮಕಾತಿಯನ್ನು ಕೆಪಿಎಸ್​ಸಿ ತಡೆಹಿಡಿದಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಹಣ ನೀಡಿ ಹುದ್ದೆ ಪಡೆದಿದ್ದಾರೆ ಎನ್ನಲಾಗುತ್ತಿರುವ ಇನ್ಸ್‌ಪೆಕ್ಟರ್‌ಗಳ ವಿಚಾರದಲ್ಲಿ ಆತಂಕ ಎದುರಾಗಿದೆ. ಯಾವುದೇ ಸಮಯದಲ್ಲಿ ಆರ್​ಟಿಒ ಇನ್ಸ್‌ಪೆಕ್ಟರ್‌ಗಳನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ಕೆಪಿಎಸ್​ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಬಾಕಿ ಹಣದ ಬಗ್ಗೆ ಡೈರಿಯಲ್ಲಿ ಬರೆದಿದ್ದ ಆರೋಪಿ ಬಸವರಾಜ್ ಕನ್ನಾಳೆ

ಈ ನಡುವೆ, ಕನ್ನಾಳೆ ಡೈರಿಯಲ್ಲಿ ಅಭ್ಯರ್ಥಿಗಳಿಂದ ಬರಬೇಕಿದ್ದ ಹಣದ ವಿವರಗಳು ಪತ್ತೆಯಾಗಿರುವುದು ಕೆಪಿಎಸ್​ಸಿ ನೇಮಕಾತಿ ಅಕ್ರಮದ ತನಿಖೆಯಲ್ಲಿ ಮತ್ತೊಂದು ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತಿದೆ. ಸಿಐಡಿ ಅಧಿಕಾರಿಗಳು ಡೈರಿಯಲ್ಲಿರುವ ಹೆಸರುಗಳು, ಹಣದ ವಿವರಗಳು ಹಾಗೂ ನೇಮಕಾತಿಗೆ ಸಂಬಂಧಿಸಿದ ಅಂಶಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:49 am, Wed, 30 September 26

Follow Us
ಕಿರಣ ಹೆಚ್​. ವಿ.
ಕಿರಣ ಹೆಚ್​. ವಿ.