ಭೂ ಕಬಳಿಕೆ ಆರೋಪ: ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿ ಕುರಿತ ಹೇಳಿಕೆಗಳಿಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 1964ರ ದಾಖಲೆಗಳ ಪ್ರಕಾರ ಸದರಿ ಭೂಮಿ ಕೆರೆ ಮತ್ತು ಸ್ಮಶಾನವಾಗಿತ್ತು. 21 ಎಕರೆ 16 ಗುಂಟೆ ಜಮೀನನ್ನು ನಕಲಿ ದಾಖಲೆಗಳ ಮೂಲಕ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆಂದು ಆರೋಪಿಸಲಾಗಿದ್ದು, ಸಾರ್ವಜನಿಕ ಭೂಮಿ ಅತಿಕ್ರಮಣದ ಬಗ್ಗೆ ಪ್ರಶ್ನಿಸಿದ್ದಾರೆ.
ಬೆಂಗಳೂರು, ಡಿ.18: ರಾಜ್ಯದ ಕಂದಾಯ ಸಚಿವ ಕೃಷ್ಣಭೈರೇಗೌಡ (Krishanbyregowda) ತಮ್ಮ ಆಸ್ತಿಯು ಪಿತ್ರಾರ್ಜಿತವಾಗಿ ತಂದೆ-ತಾತರಿಂದ ಬಂದಿದೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕೃಷ್ಣಭೈರೇಗೌಡ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಟಿವಿ9 ಕನ್ನಡ ಜತೆಗೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ, ಈ ಆಸ್ತಿ ಕುರಿತ ದಾಖಲೆಗಳು ನಕಲಿ, ಆ ದಾಖಲೆಗಳ ಪ್ರಕಾರ ಈ ಭೂಮಿಯು ಸ್ಮಶಾನ ಮತ್ತು ಕೆರೆಗೆ ಸೇರಿದ್ದಾಗಿದೆ ಎಂದು ಹೇಳಿದ್ದಾರೆ. ಸರ್ವೇ ನಂಬರ್ 47 ಮತ್ತು 46ರಲ್ಲಿ ಒಟ್ಟಾರೆ 21 ಎಕರೆ 16 ಗುಂಟೆ ಜಮೀನಿದ್ದು, ಇದನ್ನು ಸಂಪೂರ್ಣವಾಗಿ ದಾಖಲೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಕೃಷ್ಣಭೈರೇಗೌಡರ ತಾತನವರು 1921-22ರಲ್ಲಿ, ತಂದೆಯವರು 1922-23 ರಲ್ಲಿ ನಿಧನರಾಗಿದ್ದಾರೆ. ಕೃಷ್ಣಭೈರೇಗೌಡರು ಶಾಸಕರಾಗಿ ಆಯ್ಕೆಯಾಗಿದ್ದು 2003ರಲ್ಲಿ. ಇದು ಫೇಕ್ ಡಾಕ್ಯುಮೆಂಟ್‌ಗಳನ್ನು ಸೃಷ್ಟಿಸುವ ಪ್ರಯತ್ನ ಎಂದು ಹೇಳಿದ್ದಾರೆ. ಸರ್ಕಾರಿ ಜಮೀನು ಹಂಚಿಕೆಯ ನಿಯಮಗಳ ಪ್ರಕಾರ, ನಾಲ್ಕು ಅಥವಾ ನಾಲ್ಕೂವರೆ ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಅರ್ಹ ಕುಟುಂಬಗಳಿಗೆ ಮಾತ್ರ ಎರಡು ಅಥವಾ ನಾಲ್ಕು ಎಕರೆವರೆಗೆ ಜಮೀನು ನೀಡಲಾಗುತ್ತದೆ. ಆದರೆ ಕೃಷ್ಣಭೈರೇಗೌಡರಿಗೆ ನೂರಾರು ಎಕರೆ ಜಮೀನು ಹೇಗೆ ಬಂದಿದೆ, ಕೆರೆ ಅಂಗಳ, ಸ್ಮಶಾನದ ಜಮೀನು ಅವರ ಹೆಸರಿಗೆ ಹೇಗೆ ವರ್ಗಾವಣೆಯಾಯಿತು. ಪಿತ್ರಾರ್ಜಿತ ಆಸ್ತಿ ಎಂದು ಹೇಳಿಕೊಳ್ಳುತ್ತಿರುವಾಗ, ಸಾರ್ವಜನಿಕ ಭೂಮಿಯನ್ನು ಹೇಗೆ ತಮ್ಮ ಹೆಸರಿಗೆ ಮಾಡಿಕೊಳ್ಳಲಾಗಿದೆ. ಕೃಷ್ಣಭೈರೇಗೌಡರ ಬಳಿ ಇರುವ ಪಾಣಿ ದಾಖಲೆಗಳು ಇತ್ತೀಚಿನವು, ಅಂದರೆ 2023-24 ಮತ್ತು 2024-25ರ ಅವಧಿಯವು ಎಂದು ಹೇಳಿದ್ದಾರೆ. ಅವರು ಈಗಾಗಲೇ ಸಚಿವರಾಗಿದ್ದು, ಅವರ ತಂದೆಯವರೂ ಸಚಿವರಾಗಿದ್ದವರು. ಇದರಿಂದ, ಈ ದಾಖಲೆಗಳು ನಕಲಿಯಾಗಿಲ್ಲ, ಬದಲಿಗೆ ನಕಲು ಮಾಡಲು ಪ್ರಾರಂಭಿಸಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
