ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ಡಿಕೆಶಿ ಬಣಕ್ಕೆ ಮತ್ತೆ ರಾಜಣ್ಣ ಟಾಂಗ್
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ಶಾಸಕ, ಸಿಎಂ ಸಿದ್ದರಾಮಯ್ಯ ಆಪ್ತ ಕೆಎನ್ ರಾಜಣ್ಣ ಮಹತ್ವದ ಹೇಳಿಕೆ ನೀಡಿದ್ದಾರೆ. ತಮ್ಮ ರಾಜಕೀಯ ಭವಿಷ್ಯ ಕುರಿತೂ ಮಾತನಾಡಿದ ಅವರು, ‘ನನ್ನದು ಆದರೆ ಆಗಬಹುದು, ಹೋದರೆ ಹೋಗಬಹುದು’ ಎಂದು ಮಾರ್ಮಿಕವಾಗಿ ಹೇಳಿದರು. ವರಿಷ್ಠರು ಕರೆದರೆ ಖಂಡಿತ ದೆಹಲಿಗೆ ಹೋಗುತ್ತೇನೆ ಎಂದರು.
ಬೆಳಗಾವಿ, ಡಿಸೆಂಬರ್ 18: ಕಾಂಗ್ರೆಸ್ ಶಾಸಕ ಕೆಎನ್ ರಾಜಣ್ಣ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಬೆಳಗಾವಿಯಲ್ಲಿ ಮಹತ್ವದ ಹೇಳಿಕೆ ನೀಡಿದ್ದಾರೆ. 2023ರ ಮೇ 18ರಂದು ಎಐಸಿಸಿ ಕಡೆಯಿಂದ ಬರೆದಿರುವ ಪತ್ರವೊಂದನ್ನು ಉಲ್ಲೇಖಿಸಿದ ಅವರು, ಆ ಪತ್ರದ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಸಭೆ ಕುರಿತು ಪ್ರತಿಕ್ರಿಯಿಸಿದ ರಾಜಣ್ಣ, ಅದು ಕೇವಲ ಎಸ್‌ಸಿ–ಎಸ್‌ಟಿ ಶಾಸಕರ ಸಭೆಯಾಗಿರಲಿಲ್ಲ. ಸಮಾನ ಮನಸ್ಕ ಶಾಸಕರನ್ನು ಊಟಕ್ಕೆ ಆಹ್ವಾನಿಸಲಾಗಿತ್ತು, ಅದಕ್ಕಾಗಿ ತಾನೂ ಆ ಸಭೆಗೆ ಹಾಜರಾಗಿದ್ದೆನೆಂದು ಹೇಳಿದರು. ಡಿನ್ನರ್ ಸಭೆಯಲ್ಲಿ ರಾಜಕೀಯ ಸಂಬಂಧಿಸಿದ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚೆ ನಡೆದಿದ್ದು, ಅದನ್ನು ಸತೀಶ್ ಜಾರಕಿಹೊಳಿಯವರೇ ವಿವರಿಸಬಹುದು ಎಂದು ರಾಜಣ್ಣ ತಿಳಿಸಿದರು.
