ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮತ್ತೆ ಮಳೆ, ಕೃಷ್ಣಾ ನದಿ ಹರಿವಿನ ಮಟ್ಟ ಏರಿಕೆ, ಬೋಟ್ ಸಂಚಾರ ಬಂದ್

Edited By:

Updated on: Jul 24, 2026 | 11:32 AM

ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮತ್ತೆ ಸುರಿಯುತ್ತಿರುವ ಭಾರೀ ಮಳೆಯಿಂದ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಕೆಲವೇ ದಿನಗಳ ಹಿಂದೆ ನೀರಿಲ್ಲದೆ ಬತ್ತಿ ಹೋಗಿದ್ದ ನದಿ ಈಗ ಭೋರ್ಗರೆಯುತ್ತಿದೆ. ರಬಕವಿ-ಮಹೇಶವಾಡಗಿ ನಡುವೆ ದೋಣಿ ಸಂಚಾರ ಸ್ಥಗಿತಗೊಳಿಸಲಾಗಿದ್ದು, ನೀರಿನ ಹರಿವು 60 ಸಾವಿರ ಕ್ಯೂಸೆಕ್ ದಾಟಿದೆ. ಹಳೆಯ ಸೇತುವೆ ಕಾಮಗಾರಿ ವಿಳಂಬದಿಂದ ಸ್ಥಳೀಯರಿಗೆ ತೀವ್ರ ಅಸಮಾಧಾನ ಮೂಡಿದೆ.

ಬೆಳಗಾವಿ, ಜುಲೈ 24: ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಕೃಷ್ಣಾ ನದಿಯು ಮತ್ತೆ ಉಕ್ಕಿ ಹರಿಯಲು ಆರಂಭಿಸಿದೆ. ಕೆಲವೇ ದಿನಗಳ ಹಿಂದೆ ಸಂಪೂರ್ಣವಾಗಿ ಖಾಲಿಯಾಗಿದ್ದ ನದಿ, ಇದೀಗ ಮಹಾರಾಷ್ಟ್ರ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೋರ್ಗರೆಯುತ್ತಾ ಹರಿಯುತ್ತಿದೆ. ನದಿಯಲ್ಲಿ ನೀರಿನ ಹರಿವು 60 ಸಾವಿರ ಕ್ಯೂಸೆಕ್ ದಾಟಿದೆ. ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ತೇರದಾಳ ಸಮೀಪದ ರಬಕವಿ ಮತ್ತು ಬೆಳಗಾವಿ ಜಿಲ್ಲೆಯ ಮಹೇಶವಾಡಗಿ ನಡುವಿನ ದೋಣಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನೀರಿನ ಸೆಳವು ಜೋರಾಗಿರುವುದರಿಂದ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ನದಿಯಲ್ಲಿನ ನೀರಿನ ಪ್ರಮಾಣ ಹೆಚ್ಚಳದಿಂದ ರೈತರಲ್ಲಿ ಸಂತಸ ಮೂಡಿದೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಮತ್ತು ದನಕರುಗಳಿಗೆ ನೀರಿನ ಲಭ್ಯತೆ ಸುಧಾರಿಸಿದೆ. ಆದರೆ, ನೀರಿನ ಮಟ್ಟದ ಏರಿಳಿತದ ಬಗ್ಗೆ ಅವರಿಗೆ ಆತಂಕವೂ ಇದೆ. ಅಲ್ಲದೆ, ಸುಮಾರು ಹತ್ತು ವರ್ಷಗಳಿಂದ ವಿಳಂಬವಾಗಿರುವ ರಬಕವಿ-ಮಹೇಶವಾಡಗಿ ಸೇತುವೆ ಕಾಮಗಾರಿಯ ಬಗ್ಗೆ ಸ್ಥಳೀಯರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಅಧಿಕಾರಿಗಳು ಶೀಘ್ರವೇ ಸೇತುವೆ ನಿರ್ಮಾಣ ಕಾರ್ಯ ಮುಗಿಸುವಂತೆ ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us