ಎಲ್ಲರ ಚಿತ್ತ ಲಕ್ಕುಂಡಿಯತ್ತ: ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ಕಾರ್ಯ ಆರಂಭ
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಉತ್ಖನನ ಕಾರ್ಯ ಆರಂಭಗೊಂಡಿದೆ. ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು, ಹೊಯ್ಸಳರು ಆಳಿದ ಈ ಪ್ರದೇಶ ಅಪಾರ ಇತಿಹಾಸವನ್ನು ಹೊಂದಿದೆ. ನಾಣ್ಯಾಗಾರರು, ಅಕ್ಕಸಾಲಿಗರ ಕುರುಹುಗಳು ದೊರೆತಿದ್ದು, ವಾಸ್ತುಶಿಲ್ಪಗಳು, ವಜ್ರ, ವೈಡೂರ್ಯ, ಮುತ್ತು-ರತ್ನಗಳಂತಹ ಸಂಪತ್ತು ಸಿಗುವ ನಿರೀಕ್ಷೆಯಿದೆ.
ಗದಗ, ಜ.16: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಉತ್ಖನನ ಕಾರ್ಯ ಇಂದಿನಿಂದ ಪ್ರಾರಂಭಗೊಂಡಿದೆ. ಸಿದ್ಧರಕೊಳ್ಳ ಎಂಬ ಸ್ಥಳದಲ್ಲಿ ಕೇವಲ 10 ಮೀಟರ್ ವ್ಯಾಪ್ತಿಯಲ್ಲಿ ಉತ್ಖನನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಲಕ್ಕುಂಡಿಯು ಕಲ್ಯಾಣ ಚಾಲುಕ್ಯರು, ರಾಷ್ಟ್ರಕೂಟರು ಮತ್ತು ಹೊಯ್ಸಳರು ಸೇರಿದಂತೆ ಅನೇಕ ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದು, ಬಾದಾಮಿಗಿಂತಲೂ ಹೆಚ್ಚು ಐತಿಹಾಸಿಕ ಮಹತ್ವವನ್ನು ಹೊಂದಿದೆ ಎಂದು ಶಾಸನಗಳಲ್ಲಿ ಉಲ್ಲೇಖವಾಗಿದೆ. ಈ ಪ್ರದೇಶದಲ್ಲಿ ಉತ್ಖನನ ನಡೆಸಿದರೆ ಅಪಾರ ಪ್ರಮಾಣದ ಇತಿಹಾಸ ಬೆಳಕಿಗೆ ಬರಲಿದೆ ಎಂಬ ನಂಬಿಕೆ ಇದೆ. ದೇವಸ್ಥಾನದ 50 ಮೀಟರ್ ವ್ಯಾಪ್ತಿಯಲ್ಲಿ ನಾಣ್ಯಗಳನ್ನು ತಯಾರಿಸುತ್ತಿದ್ದ ಟಂಕಸಾಲೆ ಅಥವಾ ನಾಣ್ಯಗಾರರ ಕುಟುಂಬದ ಕುರುಹುಗಳು, ಅಕ್ಕಸಾಲಿಗರ ಮನೆತನಕ್ಕೆ ಸಂಬಂಧಿಸಿದ ಅವಶೇಷಗಳು ಕಂಡುಬಂದಿವೆ. ಈ ಸಂಪದ್ಭರಿತ ನಾಡಿನಲ್ಲಿ ಹಿಂದೆಯೂ ಅನೇಕ ಕಡೆ ಉತ್ಖನನ ನಡೆದಾಗ ವಜ್ರ, ವೈಡೂರ್ಯ, ಮುತ್ತು, ರತ್ನ ಮತ್ತು ಆಭರಣಗಳು ದೊರೆತಿವೆ. ಲಕ್ಕುಂಡಿಯು 101 ದೇವಸ್ಥಾನಗಳು ಮತ್ತು 101 ಬಾವಿಗಳನ್ನು ಹೊಂದಿರುವ ಪವಿತ್ರ ಸ್ಥಳವಾಗಿದೆ. ಉತ್ಖನನಕ್ಕಾಗಿ ಅಧಿಕಾರಿಗಳು ಸ್ಥಳವನ್ನು ಗುರುತಿಸಿ, ಅಳತೆ ಕಾರ್ಯ ನಡೆಸುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಇತರ ಗುರುತಿಸಲಾದ ಪ್ರದೇಶಗಳಲ್ಲೂ ಉತ್ಖನನ ಕಾರ್ಯ ಆರಂಭವಾಗಲಿದೆ. ಈ ಉತ್ಖನನದಲ್ಲಿ ಹಲವು ವಾಸ್ತುಶಿಲ್ಪಗಳು, ಅಮೂಲ್ಯ ರತ್ನಗಳು, ಆಭರಣಗಳು ಸಿಗುವ ನಿರೀಕ್ಷೆಯಿದೆ. ಗದಗ ಜಿಲ್ಲೆಯ ಜನರ ಚಿತ್ತ ಈಗ ಲಕ್ಕುಂಡಿಯತ್ತ ನೆಟ್ಟಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
