Lokayukta Raid: ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ, ಬೆಳ್ಳಂಬೆಳಗ್ಗೆ ಭ್ರಷ್ಟರಿಗೆ ಬಿಸಿಮುಟ್ಟಿಸಿದ ಅಧಿಕಾರಿಗಳು
ವಿಜಯಪುರ, ಗದಗ, ಬಾಗಲಕೋಟೆ ಸೇರಿದಂತೆ ಕರ್ನಾಟಕದ ನಾಲ್ಕಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಂಗಳವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲದಲ್ಲಿ ಶೋಧ ಕಾರ್ಯ ನಡೆದಿದೆ. ಎಲ್ಲೆಲ್ಲಿ ಲೋಕಾಯುಕ್ತ ದಾಳಿ ನಡೆದಿದೆ, ಯಾರ್ಯಾರ ಮನೆಗಳ ಮೇಲೆ ದಾಳಿ ನಡೆದಿದೆ ಎಂಬ ಮಾಹಿತಿ ಇಲ್ಲಿದೆ.
ಬೆಂಗಳೂರು, ಡಿಸೆಂಬರ್ 23: ಬಾಗಲಕೋಟೆ, ವಿಜಯಪುರ, ಉತ್ತರ ಕನ್ನಡ ಮತ್ತು ರಾಯಚೂರು ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಈ ದಾಳಿ ನಡೆದಿದೆ. ಭ್ರಷ್ಟ ಅಧಿಕಾರಿಗಳ ಬಂಗಲೆಗಳು, ಮನೆಗಳು ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಬಾಗಲಕೋಟೆ ಜಿಲ್ಲೆ ಜಿ.ಪಂ. ಯೋಜನಾ ನಿರ್ದೇಶಕರು (DRDA) ಹಾಗೂ ಅಧಿಕಾರಿ ಆಗಿರುವ ಶ್ಯಾಂ ಸುಂದರ್ ಕಾಂಬಳೆ ಅವರ ಬಾಗಲಕೋಟೆ ಮತ್ತು ಗದಗ ಜಿಲ್ಲೆಯ ನರಗುಂದದ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು. ಇದೇ ಜಿಲ್ಲೆಯ ಬಾಗೇವಾಡಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಲ್ಲಪ್ಪ ಅವರ ಮನೆಯ ಮೇಲೆಯೂ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮುಖ್ಯಾಕಾರ್ಯನಿರ್ವಹಣಾ ಅಧಿಕಾರಿ ಮಾರುತಿ ಯಶವಂತ ಮಾಳವಿ ಅವರ ನಿವಾಸದ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಲಾಯಿತು. ರಾಯಚೂರು ಜಿಲ್ಲೆಯಲ್ಲಿ ನಿವೃತ್ತ ಸಹಾಯಕ ಇಂಜಿನಿಯರ್ ವಿಜಯಲಕ್ಷ್ಮೀ ಅವರ ಶ್ರೀ ರೇಣುಕಾ ನಿಲಯದ ಮನೆಯಲ್ಲಿ ಪರಿಶೀಲನೆ ನಡೆದಿದೆ.
