ಎಂಥಾ ಕಾಲ ಬಂತಪ್ಪ: LPG ಸಿಲಿಂಡರ್​​ಗಳ ವಿತರಣೆ ವೇಳೆ ಪೊಲೀಸ್​​ ಭದ್ರತೆ!

Updated on: Mar 18, 2026 | 4:10 PM

ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಕೊರತೆ ತೀವ್ರಗೊಂಡಿದ್ದು, ಇದು ಗೃಹಬಳಕೆಯ ಅಡುಗೆ ಅನಿಲ ಪೂರೈಕೆಯ ಮೇಲೂ ಪರಿಣಾಮ ಬೀರಿದೆ. ಶಿವಾಜಿನಗರ ಬಸ್ ನಿಲ್ದಾಣದ ಬಳಿ ಸಾವಿರಾರು ಗ್ರಾಹಕರು ಸಿಲಿಂಡರ್‌ಗಳಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಹೋಮ್ ಡೆಲಿವರಿ ವಿಳಂಬವಾಗುತ್ತಿದ್ದು, ಗ್ರಾಹಕರು ಆತಂಕಗೊಂಡಿದ್ದಾರೆ. ಹೀಗಾಗಿ ಏಜೆನ್ಸಿ ಸಿಬ್ಬಂದಿ ಪೊಲೀಸರ ಬಂದೋಬಸ್ತ್​​ ಜೊತೆಗೆ ಸಿಲಿಂಡರ್​​ಗಳ ವಿತರಿಸಿದ ಪ್ರಸಂಗ ನಡೆದಿದೆ.

ಬೆಂಗಳೂರು, ಮಾರ್ಚ್​​ 18: ಎಲ್​​ಪಿಜಿ ಸಿಲಿಂಡರ್‌ಗಳ ಬಿಕ್ಕಟ್ಟುಬೆಂಗಳೂರಿನಲ್ಲಿ ತೀವ್ರಗೊಂಡಿದೆ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಕೊರತೆ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಆತಂಕ ಇದೀಗ ಗೃಹಬಳಕೆಯ ಸಿಲಿಂಡರ್‌ಗಳ ಬಳಕೆದಾರರಿಗೂ ಹಬ್ಬಿದೆ. ಸಿಲಿಂಡರ್‌ಗಳು ಸಿಗುವುದಿಲ್ಲ ಎಂಬ ಭಯದಲ್ಲಿ ಜನಸಾಮಾನ್ಯರು, ಅದರಲ್ಲೂ ವಿಶೇಷವಾಗಿ ಗೃಹಬಳಕೆ ಗ್ರಾಹಕರು, ಏಜೆನ್ಸಿಗಳ ಬಳಿ ಮುಗಿಬೀಳುತ್ತಿದ್ದಾರೆ. ಶಿವಾಜಿನಗರ ಬಸ್ ನಿಲ್ದಾಣದ ಸಮೀಪ ದೊಡ್ಡ ಸಂಖ್ಯೆಯ ಗ್ರಾಹಕರು ಸಿಲಿಂಡರ್‌ಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಂತ ದೃಶ್ಯಗಳು ಕಂಡುಬಂದಿವೆ. ಸಾಮಾನ್ಯವಾಗಿ ಏಜೆನ್ಸಿಗಳು ಮನೆಗಳಿಗೆ ಸಿಲಿಂಡರ್‌ಗಳನ್ನು ಪೂರೈಸುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಮನೆ ವಿತರಣೆ ವಿಳಂಬವಾಗುತ್ತಿರುವುದರಿಂದ ಗ್ರಾಹಕರು ತಾವೇ ಖಾಲಿ ಸಿಲಿಂಡರ್‌ಗಳನ್ನು ತಂದು ಭರ್ತಿ ಮಾಡಿದ ಸಿಲಿಂಡರ್‌ಗಳನ್ನು ಕೊಂಡೊಯ್ಯಲು ಮುಂದಾಗಿದ್ದಾರೆ. ನೂಕು ನುಗ್ಗಲು ಉಂಟಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್​​ ಸಿಬ್ಬಂದಿಯೂ ಹಾಜರಿದ್ದಿದ್ದು ಗಮನ ಸೆಳೆದಿದೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us