ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮಧೂರು ದೇಗುಲ ಜಲಾವೃತ; ವಿಡಿಯೋ ನೋಡಿ

| Updated By: Ganapathi Sharma

Updated on: Jun 27, 2024 | 11:53 AM

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಾತ್ರವಲ್ಲದೆ ನೆರೆಯ ಕೇರಳದ ಕಾಸರಗೋಡು ಜಿಲ್ಲೆಯಲ್ಲಿಯೂ ಗುರುವಾರ ಭಾರಿ ಮಳೆಯಾಗುತ್ತಿದೆ.jಜಿಲ್ಲೆಯ ಹಲವೆಡೆ ಮಳೆ ಅವಾಂತರ ಸೃಷ್ಟಿಸಿದೆ. ಬುಧವಾರ ರಾತ್ರಿಯಿಂದಲೇ ಮಳೆ ಸುರಿಯುತ್ತಿದ್ದು, ಕಾಸರಗೋಡಿನ ಇತಿಹಾಸ ಪ್ರಸಿದ್ಧ ಮಧೂರು ಮದನಂತೇಶ್ವರ ಸಿದ್ಧವಿನಾಯಕ ದೇವಸ್ಥಾನ ಜಲಾವೃತಗೊಂಡಿದೆ. ದೇಗುಲ ಜಲಾವೃತಗೊಂಡಿರುವ ವಿಡಿಯೋ ಇಲ್ಲಿದೆ.

ಮಂಗಳೂರು, ಜೂನ್ 27: ಮಂಗಳೂರು ಗಡಿಭಾಗ ಕಾಸರಗೋಡಿನಲ್ಲೂ ಮಳೆಯ ಅಬ್ಬರ ಜೋರಾಗಿದೆ. ಕೇರಳದ ಕಾಸರಗೋಡು ಜಿಲ್ಲೆಯಾದ್ಯಂತ ವರುಣನ ಆರ್ಭಟ ಜೋರಾಗಿದ್ದು, ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧ ಮಧೂರು ಸಿದ್ಧವಿನಾಯಕ ದೇವಸ್ಥಾನ ಜಲಾವೃತಗೊಂಡಿದೆ. ಮಳೆಯಿಂದಾಗಿ ಮಧುವಾಹಿನಿ ನದಿ ತುಂಬಿ ತುಳುಕಿದ್ದು, ದೇವಸ್ಥಾನದ ಒಳಭಾಗದಲ್ಲಿ ನಾಲ್ಕೈದು ಅಡಿ ನೀರು ತುಂಬಿಕೊಂಡಿದೆ.

ದೇವಸ್ಥಾನ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿದ್ದು, ದ್ವೀಪದಂತೆ ಗೋಚರವಾಗುತ್ತಿದೆ. ಜಿಲ್ಲೆಯಾಧ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಮತ್ತೊಂದೆಡೆ, ಮಂಗಳೂರಿನಲ್ಲಿಯೂ ಮಳೆ ಭಾರಿ ಅವಾಂತರಗಳನ್ನು ಸೃಷ್ಟಿಸುತ್ತಿದ್ದು, ಮಳೆ ಸಂಬಂಧಿ ಅವಘಡದಿಂದ ಇಬ್ಬರು ಮೃತಪಟ್ಟಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಸುರತ್ಕಲ್ ಜಂಕ್ಷನ್‌ನಲ್ಲಿ ಅಪಾಯಕಾರಿ ಗುಂಡಿಗಳು ನಿರ್ಮಾಣವಾಗಿವೆ. ಅದರಲ್ಲಿ ಸ್ಕೂಟರ್ ಸವಾರರೊಬ್ಬರು ಬಿದ್ದು ಗಾಯಗೊಂಡಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷ್ಯಕ್ಕೆ ಆಕ್ರೋಶಗೊಂಡ ಸವಾರ ಅದೇ ಗುಂಡಿಯಲ್ಲಿ ಸ್ಕೂಟರ್ ಇಟ್ಟು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: ಉಡುಪಿ, ಮಂಗಳೂರಿನಲ್ಲಿ ಭಾರಿ ಮಳೆ; ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ, ಮಂಗಳೂರಿನಲ್ಲಿಬ್ಬರು ಸಾವು

ಪುತ್ತೂರಿನಲ್ಲಿ ಗೋಡೆ ಕುಸಿದು ಅನಾಹುತ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿಯೂ ಎಡೆಬಿದೆ ಮಳೆ ಸುರಿಯುತ್ತಿದೆ. ಪುತ್ತೂರಿನ ಬನ್ನೂರಿನ ನಿವಾಸಿ ಮಾಜಿದ್ ಎಂಬುವವರ ಮನೆಯ ಮೇಲೆ ಕಾಂಪೌಂಡ್ ಗೋಡೆ ಕುಸಿದು, ಗಾಢ ನಿದ್ರೆಯಲ್ಲಿದ್ದ ಮಕ್ಕಳು ಮಣ್ಣಿನ ರಾಶಿಯ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಅದೃಷ್ಟವಶಾತ್, ಅವರನ್ನು ಸ್ಥಳೀಯರು ರಕ್ಷಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ