ಮಾಲೂರಿನಲ್ಲಿ 80 ಕೋಟಿ ರೂ. ಸರ್ಕಾರಿ ಭೂ ಹಗರಣ: ದಾಖಲೆ ನೋಡ್ತಿದ್ದಂತೆ ಚೇರ್ ಬಿಟ್ಟು ಎದ್ದ ತಹಶೀಲ್ದಾರ್ ರೂಪಾ!

Edited By:

Updated on: Jun 09, 2026 | 5:50 PM

ಮಾಲೂರಿನಲ್ಲಿ 80 ಕೋಟಿ ರೂ. ಮೌಲ್ಯದ 16 ಎಕರೆ ಸರ್ಕಾರಿ ಭೂಮಿ ನಕಲಿ ದಾಖಲೆಗಳ ಮೂಲಕ ಭೂಗಳ್ಳರು ಕಬಳಿಸಿದ್ದಾರೆ ಎಂದು ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಆರೋಪಿಸಿದ್ದಾರೆ. ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಅವರು, 1963ರಲ್ಲಿ ಅಧಿಕಾರಿಗಳ ಶಾಮೀಲಿನಿಂದ ಭೂಮಿ ಖಾತೆ ಬದಲಾಯಿಸಲಾಗಿದೆ ಎಂದರು. ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಇಲ್ಲದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಮಾಲೂರು, ಜೂ.9: ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ತೊರ್ನಹಳ್ಳಿ ಬಳಿ ಇರುವ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸುಮಾರು 16 ಎಕರೆ ಸರ್ಕಾರಿ ಭೂಮಿಯನ್ನು ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎಂದು ಆರೋಪಿಸಿ ಮಾಲೂರು ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ಧಿಡೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾಜಿ ಶಾಸಕರು ತಹಶೀಲ್ದಾರ್ ರೂಪಾ ಅವರನ್ನು ದಾಖಲೆ ಸಮೇತ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. ಪ್ರತಿಭಟನೆಯ ವೇಳೆ ಕಬಳಿಕೆಯಾಗಿರುವ ಭೂಮಿಯ ಅಸಲಿ ದಾಖಲೆಗಳನ್ನು ಪ್ರದರ್ಶಿಸಿದ ಮಾಜಿ ಶಾಸಕ ಮಂಜುನಾಥ್ ಗೌಡ, “ತೊರ್ನಹಳ್ಳಿ ಬಳಿಯಿರುವ ಈ 16 ಎಕರೆ ಜಾಗವು 1961ರ ದಾಖಲೆಗಳ ಪ್ರಕಾರ ಅಧಿಕೃತವಾಗಿ ಸರ್ಕಾರಿ ಜಮೀನು ಎಂದು ನಮೂದಾಗಿದೆ. ಆದರೆ, 1963 ರಲ್ಲಿ ಸರ್ಕಾರಿ ರಜಾ ದಿನದಂದೇ ಅಧಿಕಾರಿಗಳ ಶಾಮೀಲಿನಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಶೋಕ್ ಜೈನ್ ಎಂಬುವರ ಹೆಸರಿಗೆ ಕಾನೂನುಬಾಹಿರವಾಗಿ ಖಾತೆ ಬದಲಾವಣೆ ಮಾಡಲಾಗಿದೆ” ಎಂದು ಗಂಭೀರ ಆರೋಪ ಮಾಡಿದರು. ಸದ್ಯ ಈ ಜಮೀನಿನ ಮಾರುಕಟ್ಟೆ ಮೌಲ್ಯ ಸುಮಾರು 80 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

ಮಾಜಿ ಶಾಸಕರು ಹಳೆಯ ಕಂದಾಯ ದಾಖಲೆಗಳನ್ನು ಒಂದೊಂದಾಗಿ ಹೊರತೆಗೆದು ಅಧಿಕಾರಿಗಳ ಅಕ್ರಮವನ್ನು ತಹಶೀಲ್ದಾರ್ ರೂಪಾ ಅವರ ಮುಂದೆ ಸಾಬೀತುಪಡಿಸಲು ಆರಂಭಿಸುತ್ತಿದ್ದಂತೆ, ಉತ್ತರಿಸಲಾಗದೆ ತಹಶೀಲ್ದಾರ್ ಕಚೇರಿಯಿಂದ ಹೊರನಡೆದರು.ಈ ವರ್ತನೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟು ದೊಡ್ಡ ಮಟ್ಟದ ಭೂಹಗರಣಕ್ಕೆ ಸಹಕರಿಸಿದ ಅಂದಿನ ಮತ್ತು ಇಂದಿನ ಕಂದಾಯ ಇಲಾಖೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಮಂಜುನಾಥ್ ಗೌಡ ಆಗ್ರಹಿಸಿದರು. ಕಬಳಿಕೆಯಾಗಿರುವ 16 ಎಕರೆ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆ ಕೂಡಲೇ ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕರು ಜಿಲ್ಲಾಡಳಿತಕ್ಕೆ ಕಡಕ್ ಎಚ್ಚರಿಕೆ ನೀಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ

18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್​​ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.

Read More