ಅಂಕೋಲಾ: ಮನೆಯೊಳಗೆ ಅವಿತು ಕುಳಿತಿತ್ತು 16 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ! ವಿಡಿಯೋ ಇಲ್ಲಿದೆ ನೋಡಿ
ಅಂಕೋಲಾದ ಹಳವಳ್ಳಿ ಗ್ರಾಮದ ಮನೆಯೊಂದರಲ್ಲಿ 16 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿತ್ತು. ಉರಗ ತಜ್ಞರಾದ ಸೂರಜ್ ಶೆಟ್ಟಿ ಮತ್ತು ಹರೀಶ್ ಮಡಿವಾಳ ಅವರು ಅರಣ್ಯ ಇಲಾಖೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಬೃಹತ್ ಕಾಳಿಂಗ ಸರ್ಪದ ವಿಡಿಯೋ ಇಲ್ಲಿದೆ.
ಕಾರವಾರ, ಏಪ್ರಿಲ್ 17: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಳವಳ್ಳಿ ಗ್ರಾಮದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಮನೆಯೊಂದರೊಳಗೆ ಸುಮಾರು 16 ಅಡಿ ಉದ್ದದ ಈ ಕಾಳಿಂಗ ಸರ್ಪ ಅವಿತು ಕುಳಿತಿದ್ದನ್ನು ಕಂಡು ಮನೆಯವರು ಮತ್ತು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದರು. ವಿಷಯ ತಿಳಿದ ತಕ್ಷಣವೇ ಸ್ಥಳೀಯರು ಉರಗ ಪ್ರೇಮಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಉರಗ ತಜ್ಞರಾದ ಸೂರಜ್ ಶೆಟ್ಟಿ ಅರಬೈಲ್ ಹಾಗೂ ಹರೀಶ್ ಮಡಿವಾಳ ಅವರು ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯಾಚರಣೆ ಆರಂಭಿಸಿದರು. ಮನೆಯ ಕಿರಿದಾದ ಜಾಗದಲ್ಲಿ ಸೇರಿಕೊಂಡಿದ್ದ ಹಾವನ್ನು ಅತ್ಯಂತ ಎಚ್ಚರಿಕೆಯಿಂದ, ಯಾರಿಗೂ ತೊಂದರೆಯಾಗದಂತೆ ಸೆರೆಹಿಡಿದರು.
ಸೆರೆಹಿಡಿದ 16 ಅಡಿ ಉದ್ದದ ಈ ಸರ್ಪವನ್ನು ಅರಣ್ಯ ಇಲಾಖೆಯ ಮಾರ್ಗದರ್ಶನದಂತೆ ಜನವಸತಿ ಇಲ್ಲದ ದಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ಹಾವನ್ನು ಸುರಕ್ಷಿತವಾಗಿ ರಕ್ಷಿಸಿ, ಕಾಡಿಗೆ ಬಿಟ್ಟ ಸೂರಜ್ ಶೆಟ್ಟಿ ಮತ್ತು ತಂಡದ ಕಾರ್ಯಕ್ಕೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಇತ್ತೀಚೆಗೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ತಂಪಾದ ಜಾಗ ಹುಡುಕಿಕೊಂಡು ಹಾವುಗಳು ಜನವಸತಿ ಪ್ರದೇಶಕ್ಕೆ ಬರುತ್ತಿವೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ