ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ಔಷಧ ಕೊರತೆ: ರೋಗಿಗಳ ಪರದಾಟ

Updated on: Feb 26, 2026 | 2:46 PM

ಬೆಂಗಳೂರಿನ ಬೌರಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ ಕೊರತೆ ಎದುರಾಗಿದ್ದು, ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯರು ಬರೆದುಕೊಟ್ಟ ಮಾತ್ರೆಗಳು ಆಸ್ಪತ್ರೆಯಲ್ಲಿ ಲಭ್ಯವಿಲ್ಲದೆ, ದುಬಾರಿ ಬೆಲೆಗೆ ಹೊರಗೆ ಖರೀದಿಸಲು ಅನಿವಾರ್ಯವಾಗಿದೆ. ಆದರೆ ವೈದ್ಯಕೀಯ ಅಧೀಕ್ಷಕ ಅರವಿಂದ್ ಅವರು ಶೀಘ್ರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ಬೆಂಗಳೂರು, ಫೆಬ್ರವರಿ 26: ಶಿವಾಜಿನಗರದಲ್ಲಿರುವ ಬೌರಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಔಷಧಿಗಳ ಕೊರತೆ ಎದುರಾಗಿದ್ದು, ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ವೈದ್ಯರು ಬರೆದುಕೊಟ್ಟ ಮಾತ್ರೆಗಳು ಆಸ್ಪತ್ರೆಯ ಔಷಧಾಲಯದಲ್ಲಿ ಲಭ್ಯವಿಲ್ಲದೆ, ರೋಗಿಗಳು ಔಷಧಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಡ ರೋಗಿಗಳು ಹೊರಗಿನ ವೈದ್ಯಕೀಯ ಅಂಗಡಿಗಳಲ್ಲಿ ದುಬಾರಿ ಬೆಲೆ ನೀಡಿ ಔಷಧಿಗಳನ್ನು ಖರೀದಿಸಲು ಅನಿವಾರ್ಯವಾಗಿದೆ. ಹಲವು ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದು, ರಕ್ತದೊತ್ತಡ, ಮಧುಮೇಹ ಮತ್ತು ನೋವಿನ ಮಾತ್ರೆಗಳು ಆಸ್ಪತ್ರೆಯಲ್ಲಿ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ಕುರಿತು ಬೌರಿಂಗ್ ಮತ್ತು ಕರ್ಜನ್ ಆಸ್ಪತ್ರೆಗಳ ವೈದ್ಯಕೀಯ ಅಧೀಕ್ಷಕ ಅರವಿಂದ್ ಅವರು ಮಾತನಾಡಿ, ಕೆಲವು ಸಣ್ಣ ಪ್ರಮಾಣದ ಔಷಧಿಗಳ ಕೊರತೆ ಇದೆ ಎಂದು ಒಪ್ಪಿಕೊಂಡಿದ್ದಾರೆ. ತುರ್ತು ಸಂದರ್ಭಗಳಲ್ಲಿ ಅವುಗಳನ್ನು ತರಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು, ಈ ಲೋಪದೋಷಗಳನ್ನು ಸರಿಪಡಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಮತ್ತು ಶೀಘ್ರದಲ್ಲೇ ಔಷಧಿಗಳು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 26, 2026 02:44 PM
Follow Us