ಟಿಬಿ ಡ್ಯಾಂ ಭೇಟಿ ನೀಡಿ ಸ್ಟಾಪ್ಲಾಗ್ ಗೇಟ್ ಅಳವಡಿಕೆ ಕೆಲಸ ವೀಕ್ಷಿಸಿದ ಶಾಸಕ ಗಾಲಿ ಜನಾರ್ಧನರೆಡ್ಡಿ
ರಾಜಕಾರಣ ಚರ್ಚಿಸಬಾರದು ಅಂದುಕೊಂಡರೂ ಜನಾರ್ಧನ ರೆಡ್ಡಿ ಮತ್ತು ಶಿವರಾಜ ತಂಗಡಿಗಿಯನ್ನು ಜೊತೆಯಲ್ಲಿ ನೋಡಿದಾಗ ರಾಜಕಾರಣ ನೆನಪಾಗುತ್ತದೆ. ವಿಧಾನಸಭಾ ಅಧಿವೇಶನ ನಡೆಯುತ್ತಿದ್ದಾಗ (ಮೊನ್ನೆಯದಲ್ಲ, ಅದಕ್ಕೂ ಮುಂಚಿನದು) ಅವರಿಬ್ಬರ ನಡುವೆ ನಡೆದ ಮಾತಿನ ಚಕಮಕಿ ನೋಡಿದವರಿಗೆ ಮುಂದೆ ಯಾವತ್ತಾದರೂ ಜೊತೆಯಾಗಿ ಕಾಣಿಸಿಕೊಂಡಾರೆಂಬ ನಿರೀಕ್ಷೆ ಇರಲಿಲ್ಲ.
ಕೊಪ್ಪಳ: ತುಂಗಭದ್ರಾ ಜಲಾಶಯ ಈಗ ದೇಶದೆಲ್ಲೆಡೆ ಸುದ್ದಿಯಲ್ಲಿದೆ. ನೀರಲ್ಲಿ ಕೊಚ್ಚಿಹೋಗಿರುವ ಕ್ರೆಸ್ಟ್ ಗೇಟ್ ಜಾಗದಲ್ಲಿ ಬೇರೆ ಸ್ಟಾಪ್ಲಾಗ್ ಗೇಟ್ ಅಳವಡಿಸಲು ಇಂಜಿನೀಯರ್ ಮತ್ತು ತಂತ್ರಜ್ಞರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಜಿಲ್ಲೆಯ ಮುನಿರಾಬಾದ್ ಬಳಿಯ ಟಿಬಿ ಡ್ಯಾನಲ್ಲಿ ನಡೆಯುತ್ತಿರುವ ಕೆಲಸವನ್ನು ವೀಕ್ಷಿಸಲು ಇವತ್ತುಗಂಗಾವತಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಶಾಸಕ ಗಾಲಿ ಜನಾರ್ಧನರೆಡ್ಡಿ ಆಗಮಿಸಿದ್ದರು. ರೆಡ್ಡಿ ಅವರು ಕೆಆರ್ ಪಿಪಿಯ ಶಾಸಕರೆನ್ನಬೇಕೋ ಅಥವಾ ಬಿಜೆಪಿಯ ಶಾಸಕರೆನ್ನಬೇಕೋ ಗೊತ್ತಾಗುತ್ತಿಲ್ಲ. ಯಾಕೆಂದರೆ, ಅವರು ಮಾರ್ಚ್ ನಲ್ಲಿ ತಮ್ಮ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ್ದರು. ಹೋಗಲಿ ಬಿಡಿ, ಇಲ್ಲಿ ರಾಜಕಾರಣ ಚರ್ಚಿಸುವುದು ಉಚಿತವಲ್ಲ. ರೆಡ್ಡಿಯವರೊಂದಿಗೆ ಕೊಪ್ಪಳದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಿಗಿ ಸಹ ಇದ್ದರು. ಸಚಿವರು ಬಿಡಿ, ಕ್ರೆಸ್ಟ್ ಗೇಟ್ ಅನಾಹುತ ನಡೆದಾಗಿನಿಂದ ಮುನಿರಾಬಾದ್ ನಲ್ಲೇ ಇದ್ದಾರೆ. ಗಣ್ಯರಿಬ್ಬರು ಕ್ರೆಸ್ಟ್ ಗೇಟ್ ತಜ್ಞ ಕನ್ಹಯ್ಯ ನಾಯ್ಡು ಜೊತೆ ಗೇಟ್ ಅಳವಡಿಕೆ ವಿಚಾರವನ್ನು ಚರ್ಚೆ ಮಾಡುತ್ತಿರುವುದು ದೃಶ್ಯಗಳಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಳೆದ ಹತ್ತು ವರ್ಷದಲ್ಲಿ ಕನಿಷ್ಟ ಮಟ್ಟಕ್ಕಿಳಿದ ತುಂಗಭದ್ರಾ ಜಲಾಶಯ ನೀರಿನ ಪ್ರಮಾಣ