ಸಚಿವ ಭೈರತಿ ಸುರೇಶ್ರನ್ನು ಮನಬಂದಂತೆ ಬೈದಾಡಿದ ಹಿರಿಯ ರಾಜಕಾರಣಿ ಹೆಚ್ ವಿಶ್ವನಾಥ್
ವಿಶ್ವನಾಥ್ ಅವರು ತಾವೇ ಹೇಳಿಕೊಂಡಂತೆ ಪ್ರಾಮಾಣಿಕರೇ ಇರಬಹುದು, ಹಿಂದೆ ಸೈಟುಗಳನ್ನು ಆಫರ್ ಮಾಡಿದಾಗ ನಿರಾಕರಿಸಿರಬಹುದು, ಆದರೆ ತಾನೊಬ್ಬ ಹಿರಿಯ ರಾಜಕಾರಣಿ ಅನ್ನೋದನ್ನು ಅವರು ಮರೆಯಬಾರದು, ಭೈರತಿ ಸುರೇಶ್ ವಯಸ್ಸಿನಲ್ಲಿ ಬಹಳ ಚಿಕ್ಕವರು, ಹಾಗಂತ ಸಚಿವನನ್ನು ಮನಬಂದಂತೆ ಬಯ್ಯುವುದು ಅವರ ಹಿರಿತನಕ್ಕೆ ಶೋಭೆ ನೀಡದು. ಭಾಷೆಯ ಎಲ್ಲೆ ಮೀರದಂತೆ ಏನಾದರೂ ಹೇಳಲಿ ಅದಕ್ಕೆ ಕನ್ನಡಿಗರು ಆಕ್ಷೇಪಿಸಲಾರರು.
ಮೈಸೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಇಂದು ನಗರದಲ್ಲಿ ಮಾಧ್ಯಮ ಗೋಷ್ಠಿ ನಡೆಸಿ ಮಾತಾಡುವಾಗ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ರೀಯಲ್ ಎಸ್ಟೇಟ್ ಗಿರಾಕಿಯಾಗಿರುವ ಅವನು ಮೊನ್ನೆ ಹೆಲಿಕಾಪ್ಟರ್ ನಲ್ಲಿ ಬಂದು ಪೊಲೀಸ್ ಭದ್ರತೆಯೊಂದಿಗೆ ಸಭೆ ನಡೆಸಿದ್ದಾನೆ ಎಂದು ವಿಶ್ವನಾಥ್ ಹೇಳಿದರು. ಎಲ್ಲ ಸೈಟುಗಳ ಅಲಾಟ್ಮೆಂಟನ್ನು ರದ್ದು ಮಾಡಿದ್ದೇನೆ ಎಂದು ಸಚಿವ ಬಾಯಲ್ಲಿ ಹೇಳಿರುವನೇ ಹೊರತು ಇದುವರೆಗೆ ಯಾವುದೇ ಆದೇಶ ಬಂದಿಲ್ಲ ಎಂದು ಅವರು ಹೇಳಿದರು. ವಿಶ್ವನಾಥ್ 7 ಸೈಟುಗಳನ್ನು ಕೇಳಿದ್ದಾರೆ ಎಂದು ಸಚಿವ ಹೇಳಿದ್ದಕ್ಕೆ ಕೆಂಡಾಮಂಡಲರಾದ ಪರಿಷತ್ ಸದಸ್ಯ, ಯಾವನ್ರೀ ಅವನು, ಅವನಿಗೆ ತಲೆ ಇದೆಯಾ? ಅವನು ದಡ್ಡನೋ ಬುದ್ಧಿವಂತನೋ ಅಂತ ಅರ್ಥವಾಗುತ್ತಿಲ್ಲ. ತಾನು 7 ಸೈಟು ಕೇಳಿದ್ದೇಯಾದರೆ 7 ಅರ್ಜಿಗಳು ಇರಬೇಕಲ್ಲ? ಅವನಿಗೆ ತೋರಿಸಲು ಹೇಳಿ ಎಂದರು. ಹಿಂದೆ ತಾನು ಸಹ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದವನು, ಅದರೆ ಒಂದೇ ಒಂದು ಸೈಟನ್ನು ತನ್ನ ಹೆಸರಿಗೆ ಮಾಡಿಕೊಳ್ಳಲಿಲ್ಲ, ತಾನು ಪ್ರಾಮಾಣಿಕ ಅಂತ ಅಂಬೇಡ್ಕರ್ ಅವರ ಮೇಲೆ ಆಣೆ ಮಾಡುತ್ತೇನೆ ಎಂದ ಅವರು ದಿವಂಗತ ಎಸ್ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತನಗೆ ಸೈಟು ನೀಡುವಂತೆ ಅಗ ಸಚಿವರಾಗಿದ್ದ ಗೋವಿಂದರಾಜು ಅವರಿಗೆ ಹೇಳಿದ್ದರು, ಅದರೆ ತನಗೇನೂ ಬೇಡ ಎಂದಿದ್ದೆ ಅಂತ ವಿಶ್ವನಾಥ್ ಹೇಳಿದರು. ಅದೆಲ್ಲ ಏನೇ ಇರಲಿ ಈಗಿನ ಈ ಮುಡಾ ಅಕ್ರಮವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆನ್ನುವುದು ತಮ್ಮ ಆಗ್ರಹವಾಗಿದೆ ಎಂದು ವಿಶ್ವನಾಥ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವೇದಿಕೆ ಮೇಲೆ ಹೆಚ್ ಡಿ ಕುಮಾರಸ್ವಾಮಿ ಪಕ್ಕ ಕುಳಿತಿದ್ದ ಹೆಚ್ ವಿಶ್ವನಾಥ್ ರನ್ನು ಅರ್ಥಮಾಡಿಕೊಳ್ಳುವುದು ಕಷ್ಟ!