ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ: 29 ದಿನಗಳಲ್ಲಿ 1.70 ಕೋಟಿ ರೂ. ಸಂಗ್ರಹ!

Edited By:

Updated on: Sep 19, 2025 | 9:24 AM

ಮಾದೇಶ್ವರ ಮತ್ತೆ ಕೋಟ್ಯಧಿಪತಿಯಾಗಿದ್ದಾನೆ. ಅದೂ ಕೇವಲ 29 ದಿನಗಲ್ಲಿ! ಮಲೆಮಹದೇಶ್ವರ ಬೆಟ್ಟದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, 1.70 ಕೋಟಿ ರೂ. ನಗದು ಸಂಗ್ರಹವಾಗಿದೆ. ಉಳಿದಂತೆ, ಚಿನ್ನ-ಬೆಳ್ಳಿ ಇತ್ಯಾದಿ ಆಭರಣಗಳು ಮತ್ತು ವಸ್ತುಗಳೂ ಸಂಗ್ರಹವಾಗಿವೆ. ಹುಂಡಿ ಎಣಿಕೆ ಕಾರ್ಯದ ವಿಡಿಯೋ ಇಲ್ಲಿದೆ ನೋಡಿ.

ಚಾಮರಾಜನಗರ, ಸೆಪ್ಟೆಂಬರ್ 19: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ‌ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕೇವಲ 29 ದಿನಗಳಲ್ಲಿ 1.70 ಕೋಟಿ ರೂ. ಸಂಗ್ರಹವಾಗಿದೆ. ಗುರುವಾರ ಬೆಳಗ್ಗೆಯಿಂದ‌ ಸಂಜೆಯವರೆಗೂ ಹುಂಡಿ ಹಣ ಎಣಿಕೆ‌ ಕಾರ್ಯ ನಡೆದಿದೆ. ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಿಸಿ ಕ್ಯಾಮೆರಾ ಕಣ್ಣಾವಲಿನಲ್ಲಿ ಹುಂಡಿ‌‌ ಎಣಿಕೆ ನಡೆದಿದೆ. ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದು, ಸರ್ಕಾರಿ ರಜಾ ದಿನ, ಅಮಾವಾಸ್ಯೆ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಕಾರಣಗಳಿಂದ ಕಡಿಮೆ ದಿನಗಳಲ್ಲೇ ಕೋಟ್ಯಂತರ ರೂ. ಸಂಗ್ರಹವಾಗಿದೆ. 30 ಗ್ರಾಂ ಚಿನ್ನ ಹಾಗೂ 1,100 ಬೆಳ್ಳಿ ಪದಾರ್ಥಗಳು ಸಂಗ್ರಹವಾಗಿದೆ. ಇ ಹುಂಡಿಯಿಂದ 3,92,123 ರೂ. ಹಣ ಸಂಗ್ರಹವಾಗಿದೆ. ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 3 ನೋಟುಗಳೂ ಹುಂಡಿಯಲ್ಲಿ ಸಿಕ್ಕಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Sep 19, 2025 09:24 AM