IND vs ENG: ಕ್ಯಾಚ್ ಹಿಡಿದು ಮೈಮರೆತ ಸಿರಾಜ್! ಸಿಕ್ಸ್ ನೀಡಿದ ಅಂಪೈರ್; ಶಾಕಿಂಗ್ ವಿಡಿಯೋ ನೋಡಿ

Updated on: Aug 03, 2025 | 5:58 PM

Mohammed Siraj's Dropped Catch: ಓವಲ್‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ಪಂದ್ಯದ ನಾಲ್ಕನೇ ದಿನದ ಮೊದಲ ಸೆಷನ್‌ನಲ್ಲಿ ಇಂಗ್ಲೆಂಡ್ 114 ರನ್ ಗಳಿಸಿತು. ಸಿರಾಜ್ ಅವರು ಬೌಂಡರಿ ಲೈನ್ ಮೀರಿ ಕ್ಯಾಚ್ ಹಿಡಿದು, ಬ್ರೂಕ್ ಅವರಿಗೆ ಜೀವದಾನ ನೀಡಿದರು. ಇಂಗ್ಲೆಂಡ್ ತಂಡವು ಊಟದ ಸಮಯಕ್ಕೆ 3 ವಿಕೆಟ್‌ಗಳಿಗೆ 164 ರನ್ ಗಳಿಸಿದೆ. ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ ಅವರು ಕ್ರೀಸ್‌ನಲ್ಲಿದ್ದಾರೆ.

ಓವಲ್​ ಟೆಸ್ಟ್​ನ ನಾಲ್ಕನೇ ದಿನದಾಟದ ಮೊದಲ ಸೆಷನ್ ಮುಗಿದಿದೆ. ಈ ಸೆಷನ್‌ನಲ್ಲಿ ಇಂಗ್ಲೆಂಡ್ ಒಟ್ಟು 114 ರನ್ ಗಳಿಸಿದ್ದು, ಊಟದ ಸಮಯದವರೆಗೆ ಸ್ಕೋರ್ ಮೂರು ವಿಕೆಟ್‌ಗಳಿಗೆ 164 ರನ್ ಆಗಿದೆ. ಆತಿಥೇಯ ತಂಡದ ಗೆಲುವಿಗೆ 210 ರನ್‌ಗಳ ಅವಶ್ಯಕತೆ ಇದೆ. ಪ್ರಸ್ತುತ ಜೋ ರೂಟ್ 46 ಎಸೆತಗಳಲ್ಲಿ 23 ರನ್‌ ಮತ್ತು ಹ್ಯಾರಿ ಬ್ರೂಕ್ 30 ಎಸೆತಗಳಲ್ಲಿ 38 ರನ್‌ ಬಾರಿಸಿ ಕ್ರೀಸ್‌ನಲ್ಲಿದ್ದಾರೆ. ಆದರೆ ಈ ಸೆಷನ್ ಅಂತ್ಯಕ್ಕೆ ಇಂಗ್ಲೆಂಡ್‌ ತಂಡದ ಇನ್ನೊಂದು ವಿಕೆಟ್ ಪಡೆಯುವ ಅವಕಾಶ ಟೀಂ ಇಂಡಿಯಾಕ್ಕಿತ್ತು. ಆದರೆ ಬೌಂಡರಿ ಲೈನ್ ಬಳಿ ವೇಗಿ ಮೊಹಮ್ಮದ್ ಸಿರಾಜ್ ಮಾಡಿದ ಮಾಹ ಎಡವಟ್ಟಿನಿಂದ ತಂಡಕ್ಕೆ ವಿಕೆಟ್ ಸಿಗುವುದು ಕೈ ತಪ್ಪಿತು.

ವಾಸ್ತವವಾಗಿ ಇಂಗ್ಲೆಂಡ್‌ ಇನ್ನಿಂಗ್ಸ್​ನ 35 ನೇ ಓವರ್ ಬೌಲ್ ಮಾಡಿದ ಪ್ರಸಿದ್ಧ್ ಕೃಷ್ಣ ಮೊದಲ ಎಸೆತದಲ್ಲೇ ಹ್ಯಾರಿ ಬ್ರೂಕ್ ಅವರ ವಿಕೆಟ್ ಪಡೆಯುವ ಅವಕಾಶ ಸೃಷ್ಟಿಸಿದರು. ಪ್ರಸಿದ್ಧ್ ಬೌಲ್ ಮಾಡಿದ ಶಾರ್ಟ್​ ಬಾಲ್ ಅನ್ನು ಹ್ಯಾರಿ ಬ್ಯೂಕ್ ಡೀಪ್ ಬ್ಯಾಕ್​ವರ್ಡ್​ ಸ್ಕ್ವೈರ್​ ಲೆಗ್ ಕಡೆಗೆ ಬಿಗ್ ಶಾಟ್ ಆಡಿದರು. ಅದೃಷ್ಟಕ್ಕೆ ಸಿರಾಜ್​ ಕೂಡ ಅಲ್ಲೇ ಬೌಂಡರಿ ಲೈನ್ ಬಳಿ ನಿಂತಿದ್ದರು. ಬ್ರೂಕ್ ಆಡಿದ ಆ ಚೆಂಡು ಸುಲಭವಾಗಿ ಸಿರಾಜ್​ ಕೈಗೆ ಸೇರುವಂತೆ ಕಾಣುತ್ತಿತ್ತು. ಅದರಂತೆ ಸಿರಾಜ್ ಕೂಡ ಬೌಂಡರಿ ಬಳಿ ಅದ್ಭುತ ಕ್ಯಾಚ್ ತೆಗೆದುಕೊಂಡರು. ಇತ್ತ ಟೀಂ ಇಂಡಿಯಾ ಆಟಗಾರರೆಲ್ಲ ಬ್ರೂಕ್ ವಿಕೆಟ್ ಸಿಕ್ಕ ಖುಷಿಯಲ್ಲಿ ಸಂಭ್ರಮಿಸ ತೊಡಗಿದರು.

ಆದರೆ ಇತ್ತ ಕ್ಯಾಚ್ ಹಿಡಿದ ಬಳಿಕ ಕೊಂಚ ಮೈಮರೆತ ಮೊಹಮ್ಮದ್ ಸಿರಾಜ್, ಚೆಂಡನ್ನು ಕೈಯಲ್ಲಿ ಹಿಡಿದುಕೊಂಡೆ, ಬೌಂಡರಿ ಗೆರೆಯನ್ನು ತುಳಿದರು. ಇದರಿಂದ ಕೈಗೆ ಸಿಕ್ಕಿದ್ದ ಕ್ಯಾಚ್ ಸಿಕ್ಸರ್ ಆಗಿ ಬದಲಾಯಿತು. ಸಿರಾಜ್ ಮಾಡಿದ ಈ ಎಡವಟ್ಟು ಭಾರತ ತಂಡವನ್ನು ಕ್ಷಣ ಕಾಲ ಆಘಾತಕ್ಕೆ ಒಳಪಡಿಸಿತು. ನಾಯಕ ಗಿಲ್​ರಿಂದ ಹಿಡಿದು ಎಲ್ಲಾ ಆಟಗಾರು ಶಾಕ್​ಗೆ ಒಳಗಾದವರಂತೆ ಕಂಡುಬಂದರು. ಇತ್ತ ಸಿರಾಜ್ ಕೂಡ ತಾನು ಮಾಡಿದ ಎಡವಟ್ಟಿಗೆ ತಲೆ ಎತ್ತಲಾಗದೆ ಸ್ವಲ್ಪ ಸಮಯ ಬೌಂಡರಿ ಲೈನ್ ಹೊರಗೆ ಹಾಗೆಯೇ ನಿಂತುಬಿಟ್ಟರು. ಸಿರಾಜ್ ನೀಡಿದ ಜೀವದಾನದ ಲಾಭ ಪಡೆದಿರುವ ಬ್ರೂಕ್ ಹೊಡಿಬಡಿ ಆಟದ ಮೂಲಕ ಇಂಗ್ಲೆಂಡ್‌ ಸ್ಕೋರ್ ಬೋರ್ಡ್​ ವೇಗವನ್ನು ಹೆಚ್ಚಿಸುತ್ತಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Aug 03, 2025 05:57 PM