ಸಂಸದ ಮುನಿಸ್ವಾಮಿಗೆ ಆರೋಪಗಳನ್ನು ಮಾಡೋದು ಬಿಟ್ಟರೆ ಬೇರೇನೂ ಗೊತ್ತಿಲ್ಲ: ಭೈರತಿ ಸುರೇಶ್
ಮಾಧ್ಯಮದವರೊಂದಿಗೆ ಮಾತಾಡುವಾಗ ಸಂಸದ ಮುನಿಸ್ವಾಮಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೆಸರು ಮರೆತ ಹಾಗೆ ನಟಿಸುವಂತೆಯೇ, ಭೈರತಿ ಸುರೇಶ್, ಕೋಲಾರದ ಸಂಸದ ಯಾರು ಅಂತ ಪದೇಪದೆ ಕೇಳುತ್ತಾ ಅವರು ತನಗೆ ಗೊತ್ತಿಲ್ಲ ಎಂಬಂತೆ ವರ್ತಿಸುತ್ತಾರೆ. ರಾಜಕಾರಣದ ಸ್ತರ ಇಳಿದಿರುವುದಕ್ಕೆ ಇದು ಸ್ಪಷ್ಟ ಉದಾಹರಣೆ.
ಕೋಲಾರ: ನಮ್ಮ ರಾಜ್ಯದ ರಾಜಕಾರಣಿಗಳು (political leaders) ಪಕ್ಷಭೇದ ಮರೆತು ರಾಜಕಾರಣ ಸ್ತರವನ್ನು ಕೆಳಗಿಳಿಸುವ ಭಗೀರಥ ಪ್ರಯತ್ನದಲ್ಲಿ ತೊಡಗಿರುವಂತಿದೆ. ಮಾಧ್ಯಮದ ಕೆಮೆರಾಗಳು ಕಂಡಾಕ್ಷಣ ಆಪಾದನೆಗಳು ಪ್ರತಿ ಆಪಾದನೆಗಳು! ಇವತ್ತು ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ (Byrathi Suresh), ಕೋಲಾರದ ಸಂಸದ ಯಾರು? ಅಂತ ಕೇಳುತ್ತಾ ಓ ಮುನಿಸ್ವಾಮಿ (S Muniswamy) ಅವರಾ? ಬಿಡಿ, ಅವರಿಗೆ ಆಪಾದನೆಗಳನ್ನು ಮಾಡೋದು ಬಿಟ್ಟು ಬೇರೇನೂ ಗೊತ್ತಿಲ್ಲ ಅಂತ ವ್ಯಂಗ್ಯವಾಗಿ ಹೇಳುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರಾಗಿ ಸುರೇಶ್ ಏನು ಮಾಡಿದ್ದಾರೆ ಅಂತ ಮುನಿಸ್ವಾಮಿ ಕೇಳಿರುವುದಕ್ಕೆ ಉತ್ತರಿಸಿದ ಸುರೇಶ್, ಸರ್ಕಾರದ ಕೆಲಸಗಳು ಹೇಗೆ ನಡೆಯುತ್ತವೆ ಅಂತ ಅವರಿಗೆ ಗೊತ್ತಿಲ್ಲ, ತಮ್ಮ ಇಲಾಖೆಯಿಂದಲೇ ಕೋಲಾರ ನಗರದ ಅಭಿವೃದ್ಧಿಗಾಗಿ 140 ಕೋಟಿ ರೂ. ಬಿಡುಗಡೆ ಮಾಡಿರುವುದಾಗಿ ಹೇಳಿ, ಸಂಸದರು ಕಚೇರಿಗಳಿಗೆ ಹೋಗಿ ಸರ್ಕಾರೀ ಆದೇಶಗಳನ್ನು ನೋಡಿದರೆ ವಾಸ್ತವಾಂಶ ಗೊತ್ತಾಗುತ್ತದೆ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ