ನಿರ್ಗತಿಕರಿಗೆ ಸಿಗಬೇಕಿದ್ದ ಸೈಟುಗಳು ಮುಖ್ಯಮಂತ್ರಿ ಕುಟುಂಬದ ಪಾಲಾಗಿವೆ: ಬಿವೈ ವಿಜಯೇಂದ್ರ

|

Updated on: Jul 26, 2024 | 2:30 PM

ಹೆಚ್ ಕೆ ಪಾಟೀಲ್ ಅವರು ಕಾನೂನು ಸಚಿವರಾಗಿ ಹಳೆಯ ಹಗರಣಗಳ ಚರ್ಚೆಗೆ ಅವಕಾಶವಿಲ್ಲ ಎಂದಾಗ ಸಿದ್ದರಾಮಯ್ಯ ತಮ್ಮ ಸಚಿವನನ್ನು ತಡೆದು ಅರೋಪ ತನ್ನ ಕುಟುಂಬದ ಮೇಲೆ ಬಂದಿದೆ ಮತ್ತು ಅದಕ್ಕೆ ಉತ್ತರಿಸುವ ಜವಾಬ್ದಾರಿ ನನ್ನದಾಗಿದೆ, ನಾನು ಮಾತಾಡುತ್ತೇನೆ ಅಂತ ಹೇಳಿ ಸೈಟು ಸಿಕ್ಕಿರುವುದನ್ನು ಸಮರ್ಥನೆ ಮಾಡಿಕೊಳ್ಳಬಹುದಿತ್ತು, ಆದರೆ ಅವರು ಹಾಗೆ ಮಾಡಲಿಲ್ಲ ಎಂದು ವಿಜಯೇಂದ್ರ ಹೇಳಿದರು.

ಬೆಂಗಳೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿರದಿದ್ದರೆ ಮತ್ತು ಅವರಿಗೆ 14 ಸೈಟುಗಳು ನ್ಯಾಯಯುತವಾಗೇ ಸಿಕ್ಕಿದ್ದರೆ, ಯಾಕೆ ಚರ್ಚೆಯಿಂದ ಓಡಿಹೋಗುತ್ತಿದ್ದಾರೆ, ಯಾಕೆ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದರು. ಟಿವಿ9 ಗೆ ನೀಡಿದ ಎಕ್ಸ್​ಕ್ಲೂಸಿವ್ ಸಂದರ್ಶನದಲ್ಲಿ ಮಾತಾಡಿದ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಲಕ್ಷಾಂತರ ಜನ ನಿವೇಶನಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ, ಆ ಅರ್ಜಿಗಳನ್ನು ಕಡೆಗಣಿಸಿ ಸಿದ್ದರಾಮಯ್ಯನವರ ಕುಟುಂಬಕ್ಕೆ ಸೈಟುಗಳನ್ನು ನೀಡಿರುವುದು ನ್ಯಾಯಯುತವೇ? ಅನ್ಯಾಯ ಅಕ್ರಮಗಳು ನಡೆದಾಗ ವಿರೋಧ ಪಕ್ಷದ ಸದಸ್ಯರಾಗಿರುವ ನಾವು ಪ್ರಶ್ನೆ ಕೇಳುತ್ತೇವೆ, ಅದು ನಮ್ಮ ಅಧಿಕಾರ ಮತ್ತು ಹಕ್ಕು. ಪ್ರಶ್ನೆಗಳಿಗೆ ಉತ್ತರ ನೀಡುವುದು ಸರ್ಕಾರದ ಮುಖ್ಯಸ್ಥನಾಗಿರುವ ಮುಖ್ಯಮಂತ್ರಿಯವರ ಜವಾಬ್ದಾರಿ, ಅವರು ಪಲಾಯನ ಮಾಡುವುದರಲ್ಲಿ ಅರ್ಥವಿಲ್ಲ. ಮುಡಾ ಹಗರಣದ ಬಗ್ಗೆ ನಾವು ವಿರೋಧ ಪಕ್ಷವಾಗಿ ಸದನದ ಒಳಗೆ ಮತ್ತು ಹೊರಗೆ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ವಿಜಯೇಂದ್ರ ಹೇಳಿದರು. ಪರಿಶಿಷ್ಠ ಜಾತಿ/ಪಂಗಡ ಸಮುದಾಯಗಳ ಜನರಿಗೆ ಸಿಗಬೇಕಿದ್ದ ಸೈಟುಗಳು ಪ್ರತಿಷ್ಠಿತ ಕುಟುಂಬದ ಪಾಲಾಗಿರುವುದು ನಿಜಕ್ಕೂ ವಿಷಾದನೀಯ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮುಡಾ ಹಗರಣದ ಕಡತಗಳನ್ನು ಸಚಿವ ಭೈರತಿ ಸುರೇಶ್ ಬೆಂಗಳೂರಿಗೆ ಎತ್ತಿಕೊಂಡು ಬಂದಿದ್ದಾರೆ: ಬಿವೈ ವಿಜಯೇಂದ್ರ