ಮುಸ್ಕಾನ್ ಕುಟುಂಬಕ್ಕೆ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಇರುವಂತಿದೆ, ಕೂಡಲೇ ತನಿಖೆಯಾಗಬೇಕು: ಹಿಂದೂ ಕಾರ್ಯಕರ್ತೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 07, 2022 | 5:21 PM

ಅಲ್-ಖೈದಾದಂಥ ಕುಖ್ಯಾತ ಸಂಘಟನೆಯೊಂದಿಗೆ ಭಾರತದ ಯಾವುದೇ ವ್ಯಕ್ತಿ ದೇಶದ ಯಾವುದೇ ಮೂಲೆಯಲ್ಲಿ ಕೂತು ಸಂಪರ್ಕ ಇಟ್ಟುಕೊಂಡಿದ್ದರೆ, ಈ ಸಂಸ್ಥೆಗಳಿಗ ಅದು ಕೂಡಲೇ ಗೊತ್ತಾಗುತ್ತದೆ ಮತ್ತು ಅಂಥ ವ್ಯಕ್ತಿಯನ್ನು ಏನು ಮಾಡಬೇಕೋ ಅದನ್ನು ಅವು ಮಾಡುತ್ತವೆ.

ಕಲಬುರಗಿ: ಅವನ್ಯಾವನೋ ಒಬ್ಬ ಅಲ್-ಖೈದಾ ಮುಖ್ಯಸ್ಥ ಅಂತ ಹೇಳಿಕೊಳ್ಳುವ ಆಯ್ಮನ್ ಮೊಹಮ್ಮದ್ ರಬೀ ಅಲ್-ಜವಾಹಿರಿ (Ayman Mohammed Rabie al-Zawahiri) ಹೆಸರಿನ ಉಗ್ರ ನಮ್ಮ ಕನ್ನಡದ ಹುಡುಗಿ ಮಂಡ್ಯದ ಮುಸ್ಕಾನ್ ಖಾನ್ (Muskan Khan) ಬಗ್ಗೆ ಮೆಚ್ಚಿ ಮಾತಾಡಿದ್ದಲ್ಲದೆ ಹುಡುಗಿ ಧೈರ್ಯ ಮೆಚ್ಚಿ ಕವಿತೆ (poem) ಬರೆದಿರುವುದಾಗಿ ಹೇಳಿಕೊಂಡಿದ್ದು ಮುಸ್ಕಾನ್ ಕುಟುಂಬಕ್ಕೆ ಹೊಸ ಸಮಸ್ಯೆ ಸೃಷ್ಟಿಸಿದೆ ಮಾರಾಯ್ರೇ. ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥನಾಗಿದ್ದ ಜವಾಹಿರಿ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ತಲೆಮರೆಸಿಕೊಂಡಿದ್ದಾನೆ. ಅವನೆಲ್ಲಿದ್ದಾನೆ ಅಂತ ಖುದ್ದು ಅಲ್-ಖೈದಾ ಸಂಘಟನೆ ಗೊತ್ತಿಲ್ಲ. ಜಗತ್ತಿನ ಯಾವುದೋ ಮೂಲೆಯಲ್ಲಿ ಕೂತು ಅವನು ವಿಡಿಯೋ ಮಾಡಿದ್ದಾನೆ. ಅತ್ತ ಅವನು ವಿಡಿಯೋ ಬಿಡುಗಡೆ ಮಾಡುತ್ತಿದ್ದಂತೆ ನಮ್ಮ ದೇಶ ಮತ್ತು ರಾಜ್ಯದಲ್ಲಿ ಮುಸ್ಕಾನ್ ಕುಟುಂಬವನ್ನು ಅನುಮಾನದ ದೃಷ್ಟಿಯಿಂದ ನೋಡಲಾಗುತ್ತಿದೆ. ಕಲಬುರಗಿಯ ಹಿಂದೂ ಪರ ಸಂಘಟನೆಯೊಂದರ ಕಾರ್ಯಕರ್ತೆಯಾಗಿರುವ ದಿವ್ಯಾ ಹಾಗರಗಿ (Divya Hagargi)  ಅವರು ಮುಸ್ಕಾನ್ ಮತ್ತು ಅವರ ಕುಟುಂಬಕ್ಕೆ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಇರುವಂತೆ ಕಾಣುತ್ತಿದೆ ಎಂದು ಹೇಳುತ್ತಿದ್ದಾರೆ.

ಮುಸ್ಕಾನ್ ಅವರನ್ನು ಕೂಡಲೇ ವಶಕ್ಕೆ ತೆಗೆದುಕೊಂಡು ಅವರಿಗೆ ಉಗ್ರ ಸಂಘಟನೆಗಳೊಂದಿಗೆ ಲಿಂಕ್ ಇದೆಯಾ ಅನ್ನೋದನ್ನು ವಿಚಾರಣೆ ನಡೆಸಬೇಕು ಎಂದು ರಾಜ್ಯ ಮತ್ತು ಕೇಂದ್ರದ ಗೃಹ ಇಲಾಖೆಗೆ ದಿವ್ಯಾ ಅವರು ಮನವಿ ಮಾಡುತ್ತಿದ್ದಾರೆ. ವಿಚಾರಣೆ ಕೊನೆಗೊಳ್ಳುವವರೆಗೆ ಮುಸ್ಕಾನ್ ಪೊಲೀಸ್ ವಶದಲ್ಲಿರಬೇಕು. ಒಂದು ಪಕ್ಷ ಸಂಪರ್ಕ ಇರೋದು ನಿಜವಾದರೆ, ಅವರನ್ನು ಪಾಕಿಸ್ತಾನಕ್ಕೆ ಕಳಿಸಬೇಕು ಅಂತ ದಿವ್ಯಾ ಹೇಳುತ್ತಾರೆ.

ನಮ್ಮ ದೇಶದ ಗುಪ್ತಚರ ಇಲಾಖೆ, ಬೇಹುಗಾರಿಕಾ ಸಂಸ್ಥೆ, ರಾ (RAW) ಮತ್ತು ರಕ್ಷಣಾ ಇಲಾಖೆಗಳನ್ನು ದಿವ್ಯಾ ಅವರು ಹಗುರವಾಗಿ ಪರಿಗಣಿಸಿರುವಂತಿದೆ. ಅಲ್-ಖೈದಾದಂಥ ಕುಖ್ಯಾತ ಸಂಘಟನೆಯೊಂದಿಗೆ ಭಾರತದ ಯಾವುದೇ ವ್ಯಕ್ತಿ ದೇಶದ ಯಾವುದೇ ಮೂಲೆಯಲ್ಲಿ ಕೂತು ಸಂಪರ್ಕ ಇಟ್ಟುಕೊಂಡಿದ್ದರೆ, ಈ ಸಂಸ್ಥೆಗಳಿಗ ಅದು ಕೂಡಲೇ ಗೊತ್ತಾಗುತ್ತದೆ ಮತ್ತು ಅಂಥ ವ್ಯಕ್ತಿಯನ್ನು ಏನು ಮಾಡಬೇಕೋ ಅದನ್ನು ಅವು ಮಾಡುತ್ತವೆ. ನಮ್ಮ ಸಂಸ್ಥೆಗಳು ಅಸಾಧಾರಣ ಕ್ಷಮತೆ ಉಳ್ಳ ಸಂಸ್ಥೆಗಳಾಗಿವೆ.

ಅವುಗಳ ನಿಸ್ಸೀಮ ಕಾರ್ಯಕ್ಷಮತೆಯಿಂದಾಗೇ ನಮ್ಮ ಗಡಿಗಳು ಸುರಕ್ಷಿತವಾಗಿವೆ ಮತ್ತು ಗಡಿ ಈ ಭಾಗದಲ್ಲಿ ಜೀವಿಸುತ್ತಿರುವ ನಾವೆಲ್ಲ ನೆಮ್ಮದಿಯಿಂದ ಬದುಕು ನಡೆಸುತ್ತಿದ್ದೇವೆ.

ಮುಸ್ಕಾನ್ ಅವರ ಕುಟುಂಬ ಸಹ ಜವಾಹಿರಿ ಯಾರೂಂತ ನಮಗೆ ಗೊತ್ತಿಲ್ಲ, ಯಾವುದೇ ಏಜೆನ್ಸಿ ತನಿಖೆ ಮಾಡಿದರೂ ನಮ್ಮ ಕುಟುಂಬದ ಎಲ್ಲ ಸದಸ್ಯರು ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ.

ನಿಮಗೆ ಗೊತ್ತಿರಬಹುದು, ಹಿಜಾಬ್ ಪ್ರಕರಣ ಚರ್ಚೆಯಲ್ಲಿದ್ದಾಗ ಮುಸ್ಕಾನ್, ಹಿಂದೂ ಯುವಕರ ಎದುರು ಪ್ರದರ್ಶಿಸಿದ ಧೈರ್ಯ ಮೆಚ್ಚಿ ಹಲವು ಸಂಸ್ಥೆ ಮತ್ತು ವ್ಯಕ್ತಿಗಳು ಅವರಿಗೆ ಹಣದ ರೂಪದಲ್ಲಿ ಉಡುಗೊರೆ ನೀಡಿದ್ದವು. ಮುಸ್ಕಾನ್ ಕುಟುಂಬ ಆ ಹಣವನ್ನು ಆಸ್ಪತ್ರೆಯೊಂದಕ್ಕೆ ಅಂಬ್ಯುಲೆನ್ಸ್ ಖರೀದಿಸಲು ದೇಣಿಗೆಯಾಗಿ ನೀಡುತ್ತಿದ್ದಾರೆ!

ಇದನ್ನೂ ಓದಿ:  ನಾವೆಲ್ಲ ಮೊದಲಿನ ಹಾಗೆಯೇ ಪ್ರೀತಿ-ವಿಶ್ವಾಸದಿಂದ ಒಟ್ಟಾಗಿ ಜೀವಿಸೋಣ ಎಂದರು ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್

Published on: Apr 07, 2022 05:18 PM