ಆನೇಕಲ್ನಲ್ಲಿ ನಿಗೂಢ ಸ್ಫೋಟ: ಕಾಂಕ್ರೀಟ್ ರಸ್ತೆ ಛಿದ್ರ, ಬೆಚ್ಚಿಬಿದ್ದ ಸಾರ್ವಜನಿಕರು
ಬನಹಳ್ಳಿಯಲ್ಲಿ ಸಂಭವಿಸಿದ ನಿಗೂಢ ಸ್ಫೋಟದಿಂದ ಕಾಂಕ್ರೀಟ್ ರಸ್ತೆ ಒಡೆದು, ಜಲ್ಲಿಕಲ್ಲುಗಳು 100 ಮೀಟರ್‌ವರೆಗೆ ಹಾರಿದವು. ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ನೀರಿನ ಟ್ಯಾಂಕರ್ ಹೋದ ಬಳಿಕ ಸ್ಫೋಟ ಸಂಭವಿಸಿದೆ ಮತ್ತು ಬೆಂಕಿ ಹತ್ತಿಕೊಂಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಟಿಸಿಎಲ್ ಜೆಇ ಮಹೇಶ್ ಪ್ರತಿಕ್ರಿಯಿಸಿದ್ದಾರೆ. ಸ್ಫೋಟಕ್ಕೆ ಕಾರಣ ತಿಳಿಸಿದ್ದಾರೆ.
ಆನೇಕಲ್, ಮೇ 05: ಬೆಂಗಳೂರು (Benagluru) ನಗರ ಜಿಲ್ಲೆ ಆನೇಕಲ್ (Anekal) ತಾಲೂಕಿನ ಚಂದಾಪುರ ಸಮೀಪದ ಬನಹಳ್ಳಿಯಲ್ಲಿ ನಿಗೂಢ ವಸ್ತು ಸ್ಫೋಟಗೊಂಡಿದೆ (Blast). ಸ್ಫೋಟದ ತೀವ್ರತೆಗೆ ಕಾಂಕ್ರೀಟ್ ರಸ್ತೆ ಒಡೆದಿದ್ದು, ಕಾಂಕ್ರೀಟ್, ಜಲ್ಲಿ ಕಲ್ಲುಗಳು ಸುಮಾರು 100 ಮೀಟರ್ ದೂರದಷ್ಟು ಸಿಡಿದಿವೆ. ಇದರಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಾರೆ. ನೀರಿನ ಟ್ಯಾಂಕರ್ ಹೋದ ಕೆಲ ಹೊತ್ತಿನಲ್ಲಿ ಸ್ಫೋಟ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಬೆಂಕಿ ಹೊತ್ತಿಕೊಂಡಿತ್ತು. ಆತಂಕಗೊಂಡು ಸ್ಥಳೀಯರು ಮನೆಯೊಳೆಗೆ ಓಡಿಹೋದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಟಿಸಿಎಲ್ ಜೆಇ ಮಹೇಶ್ ಮಾತನಾಡಿ, 220ಕೆವಿ ವಿದ್ಯುತ್ ತಂತಿ ತೀರ ಕೆಳಗೆ ಜೋತು ಬಿದ್ದಿದೆ. ಜೋತು ಬಿದ್ದ ತಂತಿ ಕೆಳಗೆ ಎತ್ತರದ ವಾಹನ ಹಾದು ಹೋದರೆ, ಅರ್ಥಿಂಗ್ ಜೋನ್ಗೆ ಪಾಲ್ಟ್ ಕರೆಂಟ್ ನುಗ್ಗಿ ಸ್ಫೋಟವಾಗುತ್ತದೆ. ಸ್ಪೋಟ ಆಗುತ್ತಿದ್ದಂತೆ ಲೈನ್ ಟ್ರಿಪ್ ಆಗಿದೆ ಎಂದು ಹೇಳಿದರು.
ಸ್ಪೋಟದಿಂದ ಯಾರಿಗೂ ತೊಂದರೆಯಾಗಿಲ್ಲ. ಯಾರಂಡಹಳ್ಳಿಯಿಂದ ತಮಿಳುನಾಡಿಗೆ ಸಪ್ಲೆ ಲೈನ್ ಇದು. ತುಂಬಾ ಹಳೆ ಲೈನ್ ಆಗಿದ್ದು, ಬಿಸಿಲಿಗೆ ಜೋತು ಬಿದ್ದಿದೆ. ಲೈನ್ ದುರಸ್ತಿಗೆ ಈಗಾಗಲೇ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ತಾತ್ಕಾಲಿಕವಾಗಿ ಜೋತು ಬಿದ್ದಿರುವ ಲೈನ್ ಸರಿಪಡಿಸಲಾಗುವುದು ಎಂದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ