ನೆಲಮಂಗಲದಲ್ಲಿ ಚಿರತೆ ದಾಳಿ ಹೆಚ್ಚಳ: ನಾಯಿಯನ್ನು ಎಳೆದುಕೊಂಡ ಹೋದ ಭಯಾನಕ ದೃಶ್ಯ ಸೆರೆ

Updated on: Jan 14, 2026 | 12:39 PM

ನೆಲಮಂಗಲದ ಹೇಮಗಂಗಾ ಬಡಾವಣೆಯಲ್ಲಿ ಚಿರತೆ ದಾಳಿ ಮಿತಿ ಮೀರಿದ್ದು, ಜನರಲ್ಲಿ ತೀವ್ರ ಆತಂಕ ಮನೆ ಮಾಡಿದೆ. ತಮ್ಮ ಸಾಕುಪ್ರಾಣಿಗಳ ರಕ್ಷಣೆಗಾಗಿ ನಿವಾಸಿಗಳು ದೊಣ್ಣೆ ಹಿಡಿದು ಕಾವಲು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಣ್ಯಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಪರಿಸ್ಥಿತಿ ನಿಯಂತ್ರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಬೆಂಗಳೂರು, ಜ.14; ನೆಲಮಂಗಲದ ಹೇಮಗಂಗಾ ಬಡಾವಣೆಯಲ್ಲಿ ಚಿರತೆ ಹಾವಳಿ ತೀವ್ರಗೊಂಡಿದ್ದು, ಸ್ಥಳೀಯ ನಿವಾಸಿಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಚಿರತೆಗಳ ದಾಳಿ ನಿರಂತರವಾಗಿ ಹೆಚ್ಚಾಗುತ್ತಿದ್ದು, ಜನರಲ್ಲಿ ಭೀತಿ ಮನೆ ಮಾಡಿದೆ. ತಮ್ಮ ಸಾಕುಪ್ರಾಣಿಗಳ ಸುರಕ್ಷತೆಗಾಗಿ ಜನ ರಾತ್ರಿಯಿಡೀ ದೊಣ್ಣೆ ಹಿಡಿದು ಕಾವಲು ಕಾಯುವಂತಹ ಪರಿಸ್ಥಿತಿ ಎದುರಾಗಿದೆ. ಮುಂಜಾನೆ 4 ಗಂಟೆ 17 ನಿಮಿಷಕ್ಕೆ ಚಿರತೆಯೊಂದು ಬಡಾವಣೆಯ ನಾಯಿಯೊಂದರ ಮೇಲೆ ದಾಳಿ ನಡೆಸಿದ್ದು, ಈ ಘಟನೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಚಿರತೆ ನಾಯಿಯನ್ನು ಎಳೆದುಕೊಂಡು ಹೋಗಲು ಯತ್ನಿಸಿದರೂ, ನಾಯಿಯು ಚಿರತೆಯ ದಾಳಿಯಿಂದ ಬದುಕುಳಿದಿದೆ. ಆದರೆ, ದಾಳಿಯ ಪರಿಣಾಮವಾಗಿ ನಾಯಿಯು ಗಾಯಗೊಂಡು ಈಗಲೂ ಕುಂಟುತ್ತಾ ನಡೆಯುತ್ತಿದೆ. ಈ ಘಟನೆಗಳ ನಂತರ, ಹೇಮಗಂಗಾ ಬಡಾವಣೆಯ ನಿವಾಸಿಗಳು ಮುಂಜಾನೆಯ ವಾಕಿಂಗ್‌ಗೆ ತೆರಳಲು ಭಯಪಡುತ್ತಿದ್ದಾರೆ. ತಮ್ಮ ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲು ಸಹ ಹಿಂಜರಿಯುತ್ತಿದ್ದಾರೆ. ಇಲ್ಲಿ ಸಣ್ಣ ಮಕ್ಕಳ ಸಂಖ್ಯೆ ಅಧಿಕವಾಗಿರುವುದರಿಂದ ಪೋಷಕರು ಚಿಂತಿತರಾಗಿದ್ದಾರೆ. ಅಲ್ಲದೆ, ಮುಂಜಾನೆ 2 ಮತ್ತು 3 ಗಂಟೆಗೆ ಕೆಲಸಕ್ಕೆ ತೆರಳುವ ಮತ್ತು ಬರುವ ಕಾರ್ಮಿಕರು ಒಬ್ಬೊಬ್ಬರೇ ಓಡಾಡಲು ಭಯಪಡುತ್ತಿದ್ದಾರೆ. ಮೊದಲು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದಾಗ ನಿರ್ಲಕ್ಷ್ಯದ ಉತ್ತರ ಬಂದಿದೆ ಎಂದು ನಿವಾಸಿಗಳು ದೂರಿದ್ದಾರೆ. ಬಡಾವಣೆಯಲ್ಲಿರುವ ಕಾಡುಪ್ರದೇಶಗಳು ಚಿರತೆಗಳಿಗೆ ಅಡಗುತಾಣಗಳಾಗಿವೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.ಇದೇ ರೀತಿಯ ಚಿರತೆ ಹಾವಳಿ ಮುಂದುವರಿದರೆ ಮಾನವ ಜೀವಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ಚಿರತೆಗಳನ್ನು ಹಿಡಿದು ಸ್ಥಳೀಯರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಡಾವಣೆಯ ಜನರು ಸಾಮೂಹಿಕವಾಗಿ ಆಗ್ರಹಿಸಿದ್ದಾರೆ.

ವರದಿ; ಮಂಜುನಾಥ್ 

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ