ಸಾಲ ಮಾಡಿ ತಂದಿದ್ದ ‘ಕನಸಿನ ಬೈಕ್’ ಕೊಂಡ ರಾತ್ರಿಯೇ ಕಳ್ಳತನ! ಕೆಟಿಎಂ ಬೈಕ್ ಕಳವಿನ ಕೃತ್ಯ ಸಿಸಿಟಿವಿಲಿ ಸೆರೆ
ನೆಲಮಂಗಲದ ವೀವರ್ಸ್ ಕಾಲೋನಿಯಲ್ಲಿ ಚಂದು ಎಂಬುವವರು ಸಾಲ ಮಾಡಿ ಖರೀದಿಸಿದ್ದ ಹೊಸ ಕೆಟಿಎಂ ಬೈಕ್ ಅನ್ನು ಕಳ್ಳರು ರಾತ್ರೋರಾತ್ರಿ ಕದ್ದಿದ್ದಾರೆ. ಬೈಕ್ ಖರೀದಿಸಿದ ಮೊದಲ ದಿನವೇ ಈ ಕೃತ್ಯ ನಡೆದಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆದ ವಿಡಿಯೋ ಇಲ್ಲಿದೆ.
ನೆಲಮಂಗಲ, ಏಪ್ರಿಲ್ 21: ಯುವಕನೊಬ್ಬ ಕಷ್ಟಪಟ್ಟು ಹಣ ಉಳಿಸಿ, ಸಾಲ ಮಾಡಿ ತಂದಿದ್ದ ಕನಸಿನ ಬೈಕ್ ಅದೇ ದಿನ ರಾತ್ರಿ ಕಳ್ಳತನವಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ. ಬೈಕ್ ಮಾಲೀಕ ಚಂದು ಈಗ ಕಂಗಾಲಾಗಿದ್ದಾರೆ. ನೆಲಮಂಗಲ ನಗರದ ವೀವರ್ಸ್ ಕಾಲೋನಿಯ ಮನೆಯ ಮುಂದೆ ಚಂದು ತನ್ನ ಕೆಟಿಎಂ (KTM) ಬೈಕ್ ಅನ್ನು ಸುರಕ್ಷಿತವಾಗಿ ಲಾಕ್ ಮಾಡಿ ನಿಲ್ಲಿಸಿದ್ದರು. ಆದರೆ, ಮಧ್ಯರಾತ್ರಿ ಬೇರೆ ಬೈಕ್‌ನಲ್ಲಿ ಬಂದ ಕಳ್ಳರ ಗ್ಯಾಂಗ್, ಯಾರ ಭಯವೂ ಇಲ್ಲದೆ ಕ್ಷಣಾರ್ಧದಲ್ಲಿ ಲಾಕ್ ಓಪನ್ ಮಾಡಿದೆ. ಅತ್ಯಂತ ಸುಲಭವಾಗಿ ಐಷಾರಾಮಿ ಬೈಕ್ ಅನ್ನು ಎಗರಿಸಿ ಪರಾರಿಯಾಗಿದೆ.
ಕಳ್ಳರು ಬೈಕ್ ಕಳ್ಳತನ ಮಾಡಿ ಎಸ್ಕೇಪ್ ಆಗುತ್ತಿರುವ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹ್ಯಾಂಡಲ್ ಲಾಕ್ ಇದ್ದರೂ ಸಹ ಕಳ್ಳರು ಅದನ್ನು ಮುರಿದು ಬೈಕ್ ಒಯ್ಯುತ್ತಿರುವ ವಿಧಾನ ನೋಡಿ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನವಾದ 24 ಗಂಟೆಗಳಲ್ಲಿ ಬೈಕ್ ಪತ್ತೆ!
ಕೆಟಿಎಂ ಬೈಕ್ ಮಾತ್ರವಲ್ಲದೆ, ಇನ್ನೊಂದು ಬೈಕನ್ನೂ ಕಳ್ಳತನ ಮಾಡಲಾಗಿದೆ. ಇದರೊಂದಿಗೆ ಒಂದೇ ದಿನದಲ್ಲಿ ಎರಡು ಐಷಾರಾಮಿ ಬೈಕ್ ಕಳ್ಳತನವಾದಂತಾಗಿದೆ. ರಘು ಎಂಬುವವರಿಗೆ ಸೇರಿದ್ದ ಡ್ಯೂಕ್ ಬೈಕ್ ಹಾಗೂ ಚಂದು ಎಂಬವವರಿಗೆ ಸೇರಿದ್ದ ಕೆಟಿಎಂ ಬೈಕ್ ಕಳವಾಗಿದ್ದು, ಕಳ್ಳತನವಾದ 24 ಗಂಟೆಗಳ ಒಳಗೆ ಪೊಲೀಸರು ಪ್ರಕರಣ ಬಯಲಿಗೆಳೆದಿದ್ದಾರೆ. ಕಳ್ಳರ ಹೆಡೆಮುರಿ ಕಟ್ಟಿ ಎರಡೂ ಬೈಕ್ಗಳನ್ನು ವಶಕ್ಕೆ ಪಡೆದು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಒಂದೇ ದಿನದಲ್ಲಿ ಪ್ರಕರಣ ಬೇಧಿಸಿದ ಪೊಲೀಸರ ಕಾರ್ಯಕ್ಕೆ ಈಗ ಶ್ಲಾಘನೆ ವ್ಯಕ್ತವಾಗಿದೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

