ರಾಮನಗರವನ್ನು ಸೃಷ್ಟಿಸಿ ಬೆಳೆಸಿದ್ದೇ ದೇವೇಗೌಡರ ಕುಟುಂಬ ಎಂದ ನಿಖಿಲ್ ಕುಮಾರಸ್ವಾಮಿ!

|

Updated on: Jul 11, 2024 | 4:57 PM

ತಮ್ಮ ಕುಟುಂಬದ ಗುಣಗಾನ ಮಾಡಲು ಈ ಸುದ್ದಿಗೋಷ್ಠಿಯನ್ನು ಕುಮಾರಸ್ವಾಮಿ ನಡೆಸಿದರೇ ಅಂತ ಗುಮಾನಿ ಹುಟ್ಟಿದರೆ ಆಶ್ಚರ್ಯವಿಲ್ಲ. ಒಂದು ಹಂತದಲ್ಲಿ ಅವರು ಪಂಚಾಯಿತಿ ಸದಸ್ಯನಾಗಲೂ ಲಾಯಕ್ಕಿಲ್ಲದ ಜನರನ್ನು ಜಿಲ್ಲೆಯಿಂದ ಆರಿಸಲಾಗಿತ್ತು ಅಂತ ಅವರು ಹೇಳುತ್ತಾರೆ. ಯಾರನ್ನು ಕುರಿತು ಅವರು ಹಾಗೆ ಹೇಳಿದ್ದು ಜನಕ್ಕೆ ಅರ್ಥವಾಗುವುದು ಕಷ್ಟವೇನೂ ಅಲ್ಲ.

ರಾಮನಗರ: ರಾಮನಗರದಲ್ಲಿ ಇಂದು ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ರಾಮನಗರ ಜಿಲ್ಲೆಯ ಪರಿಕಲ್ಪನೆ, ಅಭಿವೃದ್ಧಿ ಮತ್ತು ರಸ್ತೆ ಹಾಗೂ ನೀರಿನ ಸಂಪರ್ಕ ಒದಗಿಸುವ ಕೆಲಸ ಹೆಚ್ ಡಿ ದೇವೇಗೌಡ, ಹೆಚ್ ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರಿಂದ ಆಗಿದೆ ಎಂದು ಹೇಳಿದರು. 1983ರಲ್ಲಿ ದೇವೇಗೌಡರು ಕನಕಪುರದಿಂದ ವಿಧಾನಸಭೆಗ ಸ್ಪರ್ಧಿಸಿದಾಗ ಕ್ಷೇತ್ರ ಕೊಂಪೆಯನ್ನು ಹೋಲುತಿತ್ತು, ಅಲ್ಲಿ ರಸ್ತೆಗಳಾಗಿದ್ದು, ನೀರಿನ ಸಂಪರ್ಕ ದಕ್ಕಿದ್ದು, ಅವರು ಅಲ್ಲಿಂದ ಶಾಸಕರಾಗಿ ಆಯ್ಕೆಯಾದ ಬಳಿಕ. 1983ರವರೆಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕನಕಪುರದ ಏಳಿಗೆಗೆ ಏನನ್ನೂ ಮಾಡಿರಲಿಲ್ಲ ಎಂದು ನಿಖಿಲ್ ಹೇಳಿದರು. ಆಗ ತಾನಿನ್ನೂ ಹುಟ್ಟಿರದಿದ್ದರೂ ರಾಜಕೀಯದ ಬಗ್ಗೆ ದೇವೇಗೌಡರಿಂದ ಸಾಕಷ್ಟು ಕೇಳಿ ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದರು. 2007 ರಲ್ಲಿ ಕುಮಾರಸ್ವಾಮಿಯವರು ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವುದರ ಹಿಂದೆ ಉದ್ದೇಶ ಅಡಗಿತ್ತು. ಚನ್ನಪಟ್ಟಣ, ಹಾರೋಹಳ್ಳಿ, ರಾಮನಗರ, ಮಾಗಡಿ ಮತ್ತು ಕನಕಪುರ ಎಲ್ಲ ತಾಲೂಕು ಕೇಂದ್ರಗಳಿಗೆ ಅದು ಕೇಂದ್ರ ಪ್ರದೇಶವಾಗಿತ್ತು. ಅದಕ್ಕೂ ಮುಖ್ಯವಾಗಿ ತಮ್ಮ ಕೆಲಸಗಳಿಗೆ ಇಲ್ಲಿನ ಜನ ಬೆಂಗಳೂರಿಗೆ ಅಲೆಯುವುವುದನ್ನು ತಪ್ಪಿಸುವುದು ಕುಮಾರಸ್ವಾಮಿಯವರ ಗುರಿಯಾಗಿತ್ತು ಎಂದು ಹೇಳಿದರು

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಹಿರೀಕರಾಗಿರುವ ರಾಜಣ್ಣ ಶ್ರೀಗಳ ಬಗ್ಗೆ ಎಚ್ಚರದಿಂದ ಮಾತಾಡಬೇಕು: ನಿಖಿಲ್ ಕುಮಾರಸ್ವಾಮಿ