ಕಾರವಾರ ಬಳಿ ಹೆದ್ದಾರಿ ಮೇಲೆ ಗುಡ್ಡ ಕುಸಿದು 9 ಜನ ಮಣ್ಣಿನಡಿ ಸಿಲುಕಿರುವ ಶಂಕೆ, ಜಿಲ್ಲಾಡಳಿತದಿಂದ ರಕ್ಷಣಾ ಕಾರ್ಯಾಚರಣೆ
ಶಿರೂರು ಬಳಿ ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ಬಂದ್ ಆಗಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಮಣ್ಣಲ್ಲಿ ಸಿಲುಕಿರುವ ಜನರನ್ನು ರಕ್ಷಿಸುವ ಕಾರ್ಯಚರಣೆಯನ್ನು ಜಿಲ್ಲಾಡಳಿತ ಆರಂಭಿಸಿದೆ. ಜೆಸಿಬಿಗಳ ಮೂಲಕ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ.
ಕಾರವಾರ: ಜಿಲ್ಲೆಯಲ್ಲಿ ಗುಡ್ಡ ಕುಸಿತದಿಂದ ಭಾರೀ ಅನಾಹುತ ಸಂಭವಿಸಿದೆ. ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ದುರ್ಘಟನೆ ನಡೆದಿದ್ದು ಕುಸಿದ ಗುಡ್ಡದ ಮಣ್ಣಿನ ಅಡಿಯಲ್ಲಿ 9 ಜನ ಸಿಲುಕಿರುವರೆಂದು ಶಂಕಿಸಲಾಗಿದೆ. ಮಣ್ಣಿನಲ್ಲಿ ಸಿಲುಕಿರುವವರ ಪೈಕಿ ಒಂದೇ ಕುಟಂಬಕ್ಕೆ ಸೇರಿದ 5 ಜನರಿದ್ದಾರೆ ಎಂದು ಹೇಳಲಾಗುತ್ತಿದೆ. ಲಕ್ಷ್ಮಣ ನಾಯಕ್, ರೋಷನ್, ಆವಂತಿಕಾ, ಶಾಂತಿ ನಾಯಕ್, ಜಗನ್ನಾಥ ನಾಯಕ್ ಇವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು ಕಾರಲ್ಲಿ ಹೋಗುತ್ತಿದ್ದಾಗ ಗುಡ್ಡದ ಮಣ್ಣು ವಾಹನದ ಮೇಲೆ ಕುಸಿದಿದೆ. ಪ್ರತ್ಯಕ್ಷದರ್ಶಿಯೊಬ್ಬರು ನೀಡಿರುವ ವಿವರಣೆಯ ಪ್ರಕಾರ ಇನ್ನೂ ಇಬ್ಬರು ಅಲ್ಲಿಯೇ ಇದ್ದ ಒಂದು ಚಿಕ್ಕ ಗೂಡಂಗಡಿಯಲ್ಲಿ ಚಹಾ ಕುಡಿಯುತ್ಯಿದ್ದರಂತೆ, ಗುಡ್ಡ ಕುಸಿದಾಗ ಅವರಿಬ್ಬರು ಮತ್ತು ಟೀ ಸ್ಟಾಲ್ ನಡೆಸುತ್ತಿದ್ದ ಇಬ್ಬರು ಮಣ್ಣಿನಡಿ ಸಿಲುಕಿದ್ದಾರೆ. ಗುಡ್ಡ ಕುಸಿತದಿಂದ ಇನ್ನೊಂದು ಅನಾಹುತವೂ ಜರುಗಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಟ್ಯಾಂಕರ್ ಒಂದು ಕುಸಿದ ಮಣ್ಣಿನ ರಭಸಕ್ಕೆ ಪಕ್ಕದಲ್ಲೇ ಹರಿಯುವ ನದಿಗೆ ಜಾರಿ ಹೋಗಿದೆ. ಅದೇ ಟ್ಯಾಂಕರ್ ನ ಡ್ರೈವರ್ ಮತ್ತು ಕ್ಲೀನರ್ ಗೂಡಂಗಡಿಯಲ್ಲಿ ಚಹಾ ಕುಡಿಯುತ್ತಿದ್ದರಂತೆ ಎಂದು ಪ್ರತ್ಯಕ್ಷದರ್ಶಿ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕೊಡಗಿನಲ್ಲಿ ಮಳೆ ಅಬ್ಬರಕ್ಕೆ ಶಾಲೆ ಹಿಂಬದಿ ಗುಡ್ಡ ಕುಸಿತ: ರಜೆ ಇದ್ದಿದ್ದರಿಂದ ತಪ್ಪಿದ ಭಾರೀ ಅನಾಹುತ