VIDEO: ಕೆಣಕಿದ ದಿಗ್ವೇಶ್ ರಾಠಿಯ ಚಳಿ ಬಿಡಿಸಿದ ನಿತೀಶ್ ರಾಣಾ
Nitish Rana and Digvesh Rathi's Fight: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಡೆಲ್ಲಿ ಲಯನ್ಸ್ ಪರ ನಿತೀಶ್ ರಾಣಾ (134) ಅಜೇಯ ಶತಕ ಸಿಡಿಸಿದ್ದರು. ಈ ಶತಕದೊಂದಿಗೆ ವೆಸ್ಟ್ ಡೆಲ್ಲಿ ಲಯನ್ಸ್ ತಂಡವು 17.1 ಓವರ್ಗಳಲ್ಲಿ 202 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಕ್ರಿಕೆಟ್ ಅಂಗಳದಲ್ಲಿ ಡೆಲ್ಲಿ ಬಾಯ್ಸ್ ಫೈಟ್ ಮುಂದುವರೆದಿದೆ. ಈ ಹಿಂದೆ ದೆಹಲಿ ಮೂಲದ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಣ ಕಿತ್ತಾಟಕ್ಕೆ ಐಪಿಎಲ್ ಸಾಕ್ಷಿಯಾಗಿತ್ತು. ಇದಾದ ಬಳಿಕ ದೆಹಲಿಯವರಾದ ನಿತೀಶ್ ರಾಣಾ ಹಾಗೂ ಹೃತಿಕ್ ಶೊಕೀನ್ ಮೈದಾನದಲ್ಲೇ ಜಗಳವಾಡಿಕೊಂಡಿದ್ದರು. ಅಲ್ಲದೆ ಕಳೆದ ಐಪಿಎಲ್ನಲ್ಲಿ ದಿಗ್ವೇಶ್ ರಾಠಿ ದೆಹಲಿ ಮೂಲದ ತನ್ನ ಸಹ ಆಟಗಾರ ಪ್ರಿಯಾಂಶ್ ಆರ್ಯ ಅವರನ್ನು ನೋಟ್ಬುಕ್ ಸೆಲೆಬ್ರೇಷನ್ ಮೂಲಕ ಕೆಣಕಿದ್ದರು. ಇದೀಗ ಮತ್ತೊಮ್ಮೆ ದಿಗ್ವೇಶ್ ರಾಠಿ ಸುದ್ದಿಯಲ್ಲಿದ್ದಾರೆ. ಅದು ಕೂಡ ನಿತೀಶ್ ರಾಣಾ ಜೊತೆ ಜಗಳಿಕ್ಕಿಳಿಯುವ ಮೂಲಕ..!
ಹೌದು, ಡೆಲ್ಲಿ ಪ್ರೀಮಿಯರ್ ಲೀಗ್ನ ಎಲಿಮಿನೇಟರ್ ಪಂದ್ಯದಲ್ಲಿ ನಿತೀಶ್ ರಾಣಾ ಹಾಗೂ ದಿಗ್ವೇಶ್ ರಾಠಿ ಕಿತ್ತಾಡಿಕೊಂಡಿದ್ದಾರೆ. ಈ ಪಂದ್ಯದ 10ನೇ ಓವರ್ನ 4ನೇ ಎಸೆತವನ್ನು ಎಸೆಯಲು ಬಂದ ದಿಗ್ವೇಶ್ ಚೆಂಡೆಸೆಯದೇ ಹಿಂತಿರುಗಿದ್ದರು. ಇದಾದ ಬಳಿಕ ಚೆಂಡೆಸೆಯಲು ಮುಂದಾದಾಗ ನಿತೀಶ್ ರಾಣಾ ಹಿಂದೆ ಸರಿದರು.
ಆ ಬಳಿಕ ದಿಗ್ವೇಶ್ ರಾಠಿ ಎಸೆದ ಎಸೆತದಲ್ಲಿ ನಿತೀಶ್ ಸ್ವಿಚ್ ಹಿಟ್ನೊಂದಿಗೆ ಸಿಕ್ಸ್ ಬಾರಿಸಿದ್ದಾರೆ. ಅಲ್ಲದೆ ಬ್ಯಾಟ್ ಮೇಲೆ ಸಹಿ ಹಾಕುವ ಮೂಲಕ ನೋಟ್ಬುಕ್ ಸೆಲೆಬ್ರೇಷನ್ಗೆ ಟಕ್ಕರ್ ಕೊಟ್ಟಿದ್ದಾರೆ. ಇದರಿಂದ ಕುಪಿತಗೊಂಡ ದಿಗ್ವೇಶ್ ಅದೇನೋ ಗೊಣಗಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ಕೈ ಮೀರಿ ಹೋಗುವ ಮುನ್ನ ಅಂಪೈರ್ ಹಾಗೂ ಸಹ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದೀಗ ನಿತೀಶ್ ರಾಣಾ ಹಾಗೂ ದಿಗ್ವೇಶ್ ರಾಠಿ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೌತ್ ಡೆಲ್ಲಿ ಸೂಪರ್ ಸ್ಟಾರ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಡೆಲ್ಲಿ ಲಯನ್ಸ್ ಪರ ನಿತೀಶ್ ರಾಣಾ (134) ಅಜೇಯ ಶತಕ ಸಿಡಿಸಿದ್ದರು. ಈ ಶತಕದೊಂದಿಗೆ ವೆಸ್ಟ್ ಡೆಲ್ಲಿ ಲಯನ್ಸ್ ತಂಡವು 17.1 ಓವರ್ಗಳಲ್ಲಿ 202 ರನ್ ಬಾರಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
