IPL 2025: 21 ಎಸೆತಗಳಲ್ಲಿ ಅರ್ಧಶತಕ; ಸಿಎಸ್​ಕೆ ಬೌಲರ್​ಗಳ ಬೆಂಡೆತ್ತಿದ ನಿತೀಶ್ ರಾಣಾ

Updated on: Mar 30, 2025 | 9:53 PM

Nitish Rana's Explosive 81: ಗುವಾಹಟಿಯಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ನಿತೀಶ್ ರಾಣಾ ಅವರ ಅದ್ಭುತ ಬ್ಯಾಟಿಂಗ್ ಎಲ್ಲರ ಗಮನ ಸೆಳೆಯಿತು. 36 ಎಸೆತಗಳಲ್ಲಿ 81 ರನ್ ಗಳಿಸಿದ ರಾಣಾ, 10 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್‌ನಿಂದಾಗಿ ರಾಜಸ್ಥಾನ್ 183 ರನ್ ಗಳಿಸಿತು.

ಗುವಾಹಟಿಯಲ್ಲಿ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 183 ರನ್ ಕಲೆಹಾಕಿದೆ. ತಂಡದ ಈ ಬೃಹತ್ ಮೊತ್ತದಲ್ಲಿ ನಿತೀಶ್ ರಾಣಾ ಅವರ ಪಾತ್ರ ಪ್ರಮುಖವಾಗಿತ್ತು. ಮೂರನೇ ಕ್ರಮಾಂಕದಲ್ಲಿ ಬಂದ ರಾಣಾ ಸಿಡಿಲಬ್ಬರದ ಇನ್ನಿಂಗ್ಸ್ ಕಟ್ಟಿದರು. ಅಲ್ಲದೆ ಪವರ್‌ಪ್ಲೇನಲ್ಲಿಯೇ ನಿತೀಶ್ ರಾಣಾ ಸ್ಫೋಟಕ ಅರ್ಧಶತಕ ಗಳಿಸಿದರು.

ರಾಜಸ್ಥಾನ್ ಆರಂಭಿಕ ಯಶಸ್ವಿ ಜೈಸ್ವಾಲ್ ಮೊದಲ ಓವರ್‌ನಲ್ಲಿ ಔಟಾದ ನಂತರ ಬಂದ ನಿತೀಶ್ ರಾಣಾ ತಮ್ಮ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿದರು. ನಂತರ ಸಿಎಸ್​ಕೆ ಪರ ಮೊದಲ ಪಂದ್ಯ ಆಡುತ್ತಿದ್ದ ಜೇಮೀ ಓವರ್ಟನ್ ಅವರ ಓವರ್‌ನಲ್ಲಿ ನಿತೀಶ್ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ನಂತರ ನಾಲ್ಕನೇ ಓವರ್‌ನಲ್ಲಿ ರವಿಚಂದ್ರನ್ ಅಶ್ವಿನ್ ಬೌಲಿಂಗ್​ನಲ್ಲಿ ಸತತ 2 ಸಿಕ್ಸರ್‌ ಮತ್ತು 1 ಬೌಂಡರಿ ಬಾರಿಸಿದರು

ನಂತರ ಆರನೇ ಓವರ್‌ನಲ್ಲಿ ಅವರು ಖಲೀಲ್ ಅಹ್ಮದ್ ಎಸೆತದಲ್ಲಿ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಇದರೊಂದಿಗೆ ನಿತೀಶ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಇದಾದ ನಂತರವೂ ನಿತೀಶ್ ಅಶ್ವಿನ್ ವಿರುದ್ಧ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಆದರೆ, ಕೊನೆಯಲ್ಲಿ ಅವರು ಶತಕ ಗಳಿಸುವ ಸಮೀಪ ಬಂದಾಗ, ಅಶ್ವಿನ್‌ಗೆ ಬಲಿಯಾದರು.

ಅಂತಿಮವಾಗಿ ನಿತೀಶ್ 36 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳಿಂದ 81 ರನ್ ಗಳಿಸಿ ಔಟಾದರು. ಐಪಿಎಲ್ ಇತಿಹಾಸದಲ್ಲಿ ಅಶ್ವಿನ್ ನಿತೀಶ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು ಇದೇ ಮೊದಲು. ಆದರೆ ಇದರ ಹೊರತಾಗಿಯೂ ನಿತೀಶ್, ಅಶ್ವಿನ್ ವಿರುದ್ಧ ತಮ್ಮ ಅತ್ಯುತ್ತಮ ದಾಖಲೆಯನ್ನು ಉಳಿಸಿಕೊಂಡರು. ಐಪಿಎಲ್‌ನಲ್ಲಿ ಇಬ್ಬರೂ ಮುಖಾಮುಖಿಯಾಗುತ್ತಿರುವುದು ಇದು 9ನೇ ಬಾರಿಯಾಗಿದ್ದು, ಈ 9 ಇನ್ನಿಂಗ್ಸ್‌ಗಳಲ್ಲಿ ನಿತೀಶ್ ಅಶ್ವಿನ್ ವಿರುದ್ಧ ಕೇವಲ 71 ಎಸೆತಗಳಲ್ಲಿ 141 ರನ್ ಗಳಿಸಿದ್ದಾರೆ. ಇದರಲ್ಲಿ 10 ಸಿಕ್ಸರ್‌ಗಳು ಮತ್ತು 10 ಬೌಂಡರಿಗಳು ಸೇರಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More