ನನಗೆ ಕಾಟ ಕೊಡಬೇಡಿ, ನಾನು ಲಸಿಕೆ ಹಾಕಿಸಿಕೊಳ್ಳಲ್ಲ; ಅಜ್ಜಿಯ ವಿಡಿಯೋ ವೈರಲ್
ಕೊರೊನಾ ಲಸಿಕೆ ಹಾಕಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಆದರೂ ವ್ಯಾಕ್ಸಿನ್ ಪಡೆಯಲು ನಿರಾಕರಣೆ ಮಾಡುತ್ತಿದ್ದಾರೆ.
ಕೊಪ್ಪಳ: ಕೊರೊನಾ ವಿರುದ್ಧ ಹೋರಾಡಬೇಕಾದರೆ ಪ್ರತಿಯೊಬ್ಬರು ಲಸಿಕೆ ಪಡೆಯಬೇಕು. ಇದು ಅನಿವಾರ್ಯವಾಗಿದೆ. ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬರುವ ಸಾಧ್ಯತೆ ಹೆಚ್ಚಿದೆ ಅಂತ ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಹೆಚ್ಚು ಗಮನಹರಿಸಬೇಕು. ಮುಂಜಾಗ್ರತಾ ಕ್ರಮಗಳತ್ತ ಗಮನಹರಿಸಬೇಕು. ಮಹಾಮಾರಿ ವಿರುದ್ಧ ಹೋರಾಡಲು ಇರುವ ಪ್ರಮುಖ ಅಸ್ತ್ರವೆಂದರೆ ಅದು ವ್ಯಾಕ್ಸಿನ್ ಪಡೆಯುವುದು. ಆದರೆ ಈ ಬಗ್ಗೆ ಜನರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೊರೊನಾ ಲಸಿಕೆ ಹಾಕಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಆದರೂ ವ್ಯಾಕ್ಸಿನ್ ಪಡೆಯಲು ನಿರಾಕರಣೆ ಮಾಡುತ್ತಿದ್ದಾರೆ. ಕೊಪ್ಪಳದಲ್ಲಿ ಲಸಿಕಾ ಅಭಿಯಾನದ ವೇಳೆ ಅಜ್ಜಿಯೊಬ್ಬಳು ಲಸಿಕೆ ಪಡೆಯಲು ನಿರಾಕರಿಸಿದ್ದಾಳೆ. ನನಗೆ ಕಾಟ ಕೊಡಬೇಡಿ. ನಾನು ಲಸಿಕೆ ಹಾಕಿಸಿಕೊಳ್ಳಲ್ಲ ಎಂದು ಅಧಿಕಾರಿಯೊಂದಿಗೆ ವಾದಕ್ಕಿಳಿದ ಅಜ್ಜಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಸಿಕೆ ಹಾಕಲು ಬಂದ ಅಧಿಕಾರಿ ಜೊತೆ ಅಜ್ಜಿ ವಾಕ್ಸಮರ ನಡೆಸಿದ್ದಾಳೆ. ಜೀವನದಲ್ಲಿ ಎಲ್ಲವೂ ಆಗಿದೆ. ಇನ್ನು ಗಟ್ಟಿಯಾಗಿ ಇದ್ದೀನಿ. ಮಕ್ಕಳು, ಮೊಮ್ಮಕ್ಕಳು ಎಲ್ಲರನ್ನೂ ನೋಡಿದ್ದೀನಿ. ನಾನು ಇಲ್ಲೇ ಸತ್ತರೂ ಪರವಾಗಿಲ್ಲ, ಆದ್ರೆ ಲಸಿಕೆ ಮಾತ್ರ ಹಾಕಿಸಿಕೊಳ್ಳೋದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ.