ದೇಶವನ್ನು ಒಗ್ಗೂಡಿಸುವ, ಮುನ್ನಡೆಸುವ ಶಕ್ತಿ ಕೇವಲ ಪ್ರಧಾನಿ ಮೋದಿ ಮತ್ತು ಬಿಜೆಪಿಗಿದೆ: ಪ್ರಮೋದ್ ಮಧ್ವರಾಜ್
ನಾವೆಲ್ಲ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ ಅವರ ಮೇಲೆ ವಿಶ್ವಾಸವಿಟ್ಟು ಪಕ್ಷಕ್ಕೆ ಬಂದಿದ್ದೇವೆ ಎಂದು ಪ್ರಮೋದ್ ಹೇಳಿದರು.
Bengaluru: ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ -ಸಚಿವರಾಗಿದ್ದ 53-ವರ್ಷ ವಯಸ್ಸಿನ ಪ್ರಮೋದ್ ಮಧ್ವರಾಜ್ (Pramod Madhwaraj) ಅವರು ಶನಿವಾರ ಕಾಂಗ್ರೆಸ್ ಪಕ್ಷವನ್ನು ತೊರೆದು ಭಾರತೀಯ ಜನತಾ ಪಕ್ಷ (BJP) ಸೇರಿದರು. ಪ್ರಮೋದ್ ಅವರೊಂದಿಗೆ ಬೇರೆ ಕೆಲವರು ಸಹ ಬಿಜೆಪಿ ಸೇರಿದರು. ಹಿರಿಯ ಕಾಂಗ್ರೆಸ್ ನಾಯಕಿ ಮನೋರಮಾ ಮಧ್ವರಾಜ್ (Manorama Madhwaraj) ಅವರ ಪುತ್ರರಾಗಿರುವ ಪ್ರಮೋದ್ ಪಕ್ಕಾ ಕಾಂಗ್ರೆಸ್ಸಿಗರೆಂದು ಗುರುತಿಸಿಕೊಂಡಿದ್ದರು. ಪಕ್ಷ ತೊರೆಯುವ ಸ್ಥಿತಿ ಯಾಕೆ ಬಂತು ಅಂತ ವಿವರಿಸುವ ಪತ್ರವೊಂದನ್ನು ಅವರು ಕೆಪಿಸಿಸಿ ಅಧ್ಯಕ್ಷರಿಗೆ ಬರೆದಿದ್ದಾರೆ.
ಬೆಂಗಳೂರಿನ ಹೋಟೆಲೊಂದರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾತಾಡಿದ ಪ್ರಮೋದ್, ತಮ್ಮ ಮತ್ತು ಅವರೊಂದಿಗೆ ಶನಿವಾರ ಬಿಜೆಪಿ ಸೇರಿದ ಜನರ ಬದುಕಿನಲ್ಲಿ ಒಂದು ಹೊಸ ಪರ್ವ ಆರಂಭವಾಗಿದೆ. ವನ್ ನೇಷನ್ ವನ್ ಟ್ಯಾಕ್ಸ್, ವನ್ ನೇಷನ್ ವನ್ ರೇಷನ್ ಉಕ್ತಿಗಳ ಹಾಗೆ ಇಂದು ಭಾರತದ ಸ್ಥಿತಿ ವನ್ ನೇಷನ್, ವನ್ ಲೀಡರ್ ಅಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ವನ್ ಪಾರ್ಟಿ (ಬಿಜೆಪಿ) ಆಗಿದೆ. ಕೇವಲ ಮೋದಿ ಮತ್ತು ಬಿಜೆಪಿಗೆ ಮಾತ್ರ ದೇಶವನ್ನು ಪ್ರತಿನಿಧಿಸುವ, ಒಂದುಗೂಡಿಸುವ ಮತ್ತು ಮುನ್ನಡೆಸುವ ಶಕ್ತಿಯಿದೆ. ನಾವೆಲ್ಲ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ ಅವರ ಮೇಲೆ ವಿಶ್ವಾಸವಿಟ್ಟು ಪಕ್ಷಕ್ಕೆ ಬಂದಿದ್ದೇವೆ ಎಂದು ಪ್ರಮೋದ್ ಹೇಳಿದರು.
ಪ್ರಮೋದ್ ಅವರೊಂದಿಗೆ ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ಮಂಜುನಾಥ ಗೌಡ, ಎಂ ಎಲ್ ಸಿ ಸಂದೇಶ್ ನಾಗರಾಜ್, ನಿವೃತ್ತ ಐಆರ್ ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ, ಮಾಜಿ ಸಚಿವ ಎಸ್.ಡಿ. ಜಯರಾಂ ಪುತ್ರ ಅಶೋಕ್ ಜಯರಾಂ ಬಿಜೆಪಿಗೆ ಸೇರ್ಪಡೆಯಾದರು.