Promod Madhwaraj: ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರ್ಪಡೆಯಾದ ಮಾಜಿ ಮಂತ್ರಿ ಪ್ರಮೋದ್ ಮಧ್ವರಾಜ್
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ಪತ್ರ ರವಾನಿಸಿರುವ ಪ್ರಮೋದ್ ಮಧ್ವರಾಜ್ ಅವರು ಸುದೀರ್ಘವಾದ ರಾಜೀನಾಮೆ ಪತ್ರದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ.
ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ( Promod Madhwaraj -Former Karmataka Minister from Udupi) ಕಾಂಗ್ರೆಸ್ಗೆ ರಾಜೀನಾಮೆ (Resignation) ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ (KPCC President DK Shivakumar) ಪತ್ರ ರವಾನಿಸಿರುವ ಪ್ರಮೋದ್ ಮಧ್ವರಾಜ್ ಅವರು ಸುದೀರ್ಘವಾದ ರಾಜೀನಾಮೆ ಪತ್ರದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ. ರಾಜೀನಾಮೆಗೆ ಜಿಲ್ಲಾ ಕಾಂಗ್ರೆಸ್ ನ ನಡವಳಿಕೆ ಕಾರಣ ಎಂದು ಪ್ರಮೋದ್ ಮಧ್ವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಮೋದ್ ಮಧ್ವರಾಜ್ ಮುಂದಿನ ನಡೆ ಬಿಜೆಪಿ ಕಡೆಗಿದೆ ಎಂದು ಮೆಲ್ನೋಟಕ್ಕೆ ಗೋಚರವಾಗುತ್ತಿದೆ. ಈ ಹಿಂದೆಯೇ, ಹಲವು ಬಾರಿ ಬಿಜೆಪಿ ಸೇರ್ಪಡೆ ಬಗ್ಗೆ ವದಂತಿ ಎದ್ದಿತ್ತು. ಕಳೆದ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದರು. ಈ ಹಿಂದೆ ಜಿಲ್ಲಾ ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಕಾಂಗ್ರೆಸ್- ಜೆಡಿಎಸ್ ಜಂಟಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಕಳೆದ ಮೂರು ವರ್ಷಗಳಿಂದ ಜಿಲ್ಲಾ ಕಾಂಗ್ರೆಸ್ ನಲ್ಲಿ ನಿಷ್ಕ್ರಿಯರಾಗಿದ್ದ ಪ್ರಮೋದ್ ಅವರಿಗೆ ಜಿಲ್ಲಾ ಬಿಜೆಪಿ ಈ ಬಾರಿ ಗ್ರೀನ್ ಸಿಗ್ನಲ್ ನೀಡಿದೆ. ಹಾಲಿ ಶಾಸಕ ರಘುಪತಿ ಭಟ್ ರಿಂದಲೂ ನೋ ಅಬ್ಜೆಕ್ಷನ್ ಬಂದಿದೆ. ಯಾವುದೇ ಪದವಿಯ ಆಕಾಂಕ್ಷೆ ಇಲ್ಲದೆ ಬಿಜೆಪಿಗೆ ಬಂದರೆ ಸ್ವಾಗತ ಎಂದು ಸ್ಥಳೀಯ ಬಿಜೆಪಿ ಹೇಳಿದ್ದರೆ, ಯಾವುದೇ ಬೇಡಿಕೆ ಇಲ್ಲದೆ ಪಕ್ಷ ಸೇರ್ಪಡೆಗೆ ಪ್ರಮೋದ್ ಒಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಪ್ರಮೋದ್ ಕಳೆದ ತಿಂಗಳು ಉಡುಪಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು (Basavaraj Bommai) ಭೇಟಿಯಾಗಿದ್ದರು ಎಂಬುದು ಗಮನಾರ್ಹ. ಗಂಗಾಮತಸ್ಥರ ಒಲವು ಗಳಿಸಲು ಪ್ರಮೋದ್ ಸೇರ್ಪಡೆಗೆ ಬಿಜೆಪಿ ಸಮ್ಮತಿಸಿರಬಹುದು ಎಂದು ವ್ಯಾಖ್ಯಾನಿಸಲಾಗಿದೆ.
ಬೆಂಗಳೂರಿನಲ್ಲಿ ಅನ್ಯ ಪಕ್ಷದ ನಾಯಕರ ಬಿಜೆಪಿ ಸೇರ್ಪಡೆ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ಮಂಜುನಾಥ್ ಗೌಡ, ಮಾಜಿ ಎಂಎಲ್ಸಿ ಸಂದೇಶ್, ನಾಗರಾಜ್, ನಿವೃತ್ತ ಐಆರ್ ಎಸ್ ಅಧಿಕಾರಿ ಲಕ್ಷ್ಮೀ ಅಶ್ವಿನ್ ಗೌಡ, ಮಾಜಿ ಸಚಿವ ಎಸ್.ಡಿ. ಜಯರಾಂ ಪುತ್ರ ಅಶೋಕ್ ಜಯರಾಂ ಅವರುಗಳು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಸೇರ್ಪಡೆಯಾದರು.
ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್. ಅಶೋಕ್, ಎಸ್.ಟಿ. ಸೋಮಶೇಖರ್, ಮುನಿರತ್ನ, ನಾರಾಯಣ ಗೌಡ, ಕೆ. ಗೋಪಾಲಯ್ಯ, ಡಾ. ಸುಧಾಕರ್, ಎಂಎಲ್ಸಿ ಸಿ.ಪಿ. ಯೋಗೇಶ್ವರ್, ಸಂಸದ ಎಸ್. ಮುನಿಸ್ವಾಮಿ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಉಪಸ್ಥಿತಿರಿದ್ದರು.
ಇನ್ನೊಂದು ಪಟ್ಟಿ ಕೂಡ ಇದೆ, ತಾಂತ್ರಿಕ ಕಾರಣದಿಂದ ಈಗಲೇ ಹೇಳಲು ಆಗಲ್ಲ- ಕಂದಾಯ ಸಚಿವ ಅಶೋಕ್: ಬೇರೆ ಬೇರೆ ಪಕ್ಷಗಳ ನಾಯಕರು ಬಿಜೆಪಿ ಸೇರುತ್ತಿರುವ ಸಂದರ್ಭದಲ್ಲಿ ಮಾತನಾಡಿದ ಕಂದಾಯ ಸಚಿವ ಅಶೋಕ್ ಅವರು ಇಂದು ಸೇರ್ಪಡೆ ಆಗಿರುವವರು ಮೊದಲ ಪಟ್ಟಿ ಮಾತ್ರ. ಇನ್ನೊಂದು ಪಟ್ಟಿ ಕೂಡ ಇದೆ. ಇನ್ನೊಂದು ಹಾಲಿ ಶಾಸಕರ ಪಟ್ಟಿ ಅಧ್ಯಕ್ಷರ ಬಳಿ ಇದೆ. ತಾಂತ್ರಿಕ ಕಾರಣದಿಂದ ಅದನ್ನ ಈಗಲೇ ಹೇಳಲು ಆಗಲ್ಲ. ಚುನಾವಣೆ ದೃಷ್ಟಿಯಿಂದ ಗೆಲ್ಲುವವರನ್ನ ಗುರುತಿಸಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಸುದೀರ್ಘ ಪತ್ರದಲ್ಲಿ ನೋವು ತೋಡಿಕೊಂಡಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ರವಾನಿಸಿದ ಪತ್ರದ ಸಾರಾಂಶ ಹೀಗಿದೆ: ಇತ್ತೀಚೆಗೆ ನನ್ನನ್ನು ಕೆಪಿಸಿಸಿ ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಕ್ಕಾಗಿ ನಿಮಗೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಹಿಂದೆ ನನ್ನ ಸಮಯ ಮತ್ತು ದುಡಿದ ಹಣವನ್ನು ಪಕ್ಷಕ್ಕಾಗಿ ವ್ಯಯಿಸಿ ಕಾಂಗ್ರೆಸ್ ಪಕ್ಷವನ್ನು ಕಟ್ಟುವಲ್ಲಿ ನನ್ನ ವಿನಮ್ರ ಕೊಡುಗೆಗಳನ್ನು ನೀವು ಮತ್ತು ಪಕ್ಷವು ಅರಿತುಕೊಂಡಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷವು ನನ್ನ ಅಧಿಕಾರಾವಧಿಯಲ್ಲಿ ಸರ್ಕಾರದ ವಿವಿಧ ಹುದ್ದೆಗಳನ್ನು ನೀಡುವ ಮೂಲಕ ಪ್ರತಿಫಲವನ್ನು ನೀಡಿದೆ. ಚುನಾಯಿತ ಪ್ರತಿನಿಧಿಯಾಗಿ ನಾನು ನನ್ನ ಕ್ಷೇತ್ರ, ಜಿಲ್ಲೆ ಮತ್ತು ರಾಜ್ಯಕ್ಕಾಗಿ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸಮರ್ಪಣಾಭಾವ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ.
ದಕ್ಷ್ ಸಂಸ್ಥೆ ಸಮೀಕ್ಷೆಯನ್ನು ನಡೆಸಿತು ಮತ್ತು ನಾನು ಕರ್ನಾಟಕ ರಾಜ್ಯದಲ್ಲಿ ಅತ್ಯುತ್ತಮ ಮತ್ತು ನಂಬರ್ 1 ಶಾಸಕನಾಗಿ ಸ್ಥಾನ ಪಡೆದಿದ್ದೇನೆ. ಕಳೆದ ಮೂರು ವರ್ಷಗಳಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಉಸಿರುಗಟ್ಟುವಿಕೆಗೆ ಕಾರಣವಾದ ಪರಿಸ್ಥಿತಿಯು ನನಗೆ ಕೆಟ್ಟ ಅನುಭವವಾಗಿದೆ ಎಂದು ತಿಳಿಸಲು ವಿಷಾದಿಸುತ್ತೇನೆ. ಈ ಸಂಗತಿಗಳನ್ನು ನಿಮ್ಮ ಗಮನಕ್ಕೆ ತರಲಾಗಿದೆ ಮತ್ತು ಇತರ ಪಕ್ಷದ ಮುಖಂಡರಿಗೆ ತಿಳಿಸಲಾಗಿದೆ. ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿನ ಪ್ರಚಲಿತ ಪರಿಸ್ಥಿತಿಯ ಬಗ್ಗೆ ನನ್ನ ಅಸಮಾಧಾನವನ್ನು ನಿವಾರಿಸಲು ಪಕ್ಷದಿಂದ ಯಾವುದೇ ಪ್ರಯೋಜನಕಾರಿ ಕ್ರಮಗಳನ್ನು ತೆಗೆದುಕೊಳ್ಳದಿರುವುದನ್ನು ನಾನು ಗಮನಿಸಿದ್ದೇನೆ.
ಮೇಲೆ ವಿವರಿಸಿದ ಸಂದರ್ಭಗಳಿಂದಾಗಿ ನಾನು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯುವುದು ಮತ್ತು ಇತ್ತೀಚೆಗೆ ನನಗೆ ನಿಯೋಜಿಸಲಾದ ಹೊಸ ಹುದ್ದೆಗೆ ನ್ಯಾಯ ಸಲ್ಲಿಸುವುದು ಅಸಾಧ್ಯವಾಗುವ ಹಂತವನ್ನು ತಲುಪಿದೆ. ಕೆಪಿಸಿಸಿ ಉಪಾಧ್ಯಕ್ಷ ಸ್ಥಾನವನ್ನು ಸ್ವೀಕರಿಸದಿರಲು ಮತ್ತು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಈ ಪತ್ರದ ಮೂಲಕ ನಮ್ಮ ಪಕ್ಷದ ಎಲ್ಲಾ ನಾಯಕರು ಮತ್ತು ಪಕ್ಷದ ಕಾರ್ಯಕರ್ತರಿಗೆ ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತೇನೆ.
Published On - 4:51 pm, Sat, 7 May 22