ತಮ್ಮ ಹುಳುಕು ಮುಚ್ಚಿಕೊಳ್ಳಲು ವಿರೋಧ ಪಕ್ಷದ ನಾಯಕರು ಇಲ್ಲಸಲ್ಲದ ಆರೋಪ ಮಾಡಿತ್ತಿದ್ದಾರೆ: ಬಿವೈ ವಿಜಯೇಂದ್ರ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 04, 2022 | 6:15 PM

ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಲು ಮತ್ತು ದೋಷಿಗಳು ಯಾರೇ ಆಗಿರಲಿ ಅವರನ್ನು ಶಿಕ್ಷೆಗೊಳಪಡಿಸಲು ಮಾನ್ಯ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರ ಕಟಿಬದ್ಧವಾಗಿವೆ ಅಂತ ವಿಜಯೇಂದ್ರ  ಹೇಳಿದರು.

ಭಾರತೀಯ ಜನತಾ ಪಕ್ಷ ರಾಜ್ಯ ಘಟಕದ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಅವರು ಬುಧವಾರ ಮೈಸೂರಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ, ಪಿ ಎಸ್ ಐ ಹಗರಣದಲ್ಲಿ (PSI Recruitment Scam) ಭಾಗಿಯಾಗಿರುವರೆಂದು ಅರೋಪ ಎದುರಿಸುತ್ತಿರುವ ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಅವರ ಮೇಲೆ ಇಲ್ಲಸಲ್ಲದ ಆಪಾದನೆಗಳನ್ನು ಮಾಡಲಾಗುತ್ತಿದೆ, ಎಂದು ಹೇಳಿದರು. ವಿರೋಧ ಪಕ್ಷದವರು ಅರೋಪಗಳನ್ನು ಮಾಡುವ ಮೊದಲೇ ಸನ್ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bomami) ಅವರು ಒಂದು ನಿಷ್ಪಕ್ಷಪಾತ ತನಿಖೆಗೆ ಆದೇಶ ನೀಡಿದ್ದಾರೆ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ವಿಜಯೇಂದ್ರ ಪತ್ರಕರ್ತರಿಗೆ ತಿಳಿಸಿದರು.

ತಮ್ಮ ಹುಳಕುಗಳನ್ನು ಮುಚ್ಚಿಕೊಳ್ಳಲು ವಿರೋಧ ಪಕ್ಷಗಳು ವೃಥಾ ಆರೋಪ ಮಾಡುತ್ತಿವೆ ಎಂದ ವಿಜಯೇಂದ್ರ ಅವರು ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಲು ಮತ್ತು ದೋಷಿಗಳು ಯಾರೇ ಆಗಿರಲಿ ಅವರನ್ನು ಶಿಕ್ಷೆಗೊಳಪಡಿಸಲು ಮಾನ್ಯ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರ ಕಟಿಬದ್ಧವಾಗಿವೆ ಅಂತ  ಹೇಳಿದರು.

ಇದೇ ಸಂದರ್ಭದಲ್ಲಿ ವಿಜಯೇಂದ್ರ ಅವರಿಗೆ ರಾಜ್ಯ ಸಂಪುಟ ವಿಸ್ತರಣೆ ವಿಳಂಬಗೊಳ್ಳುತ್ತಿರುವ ಬಗ್ಗೆ ಕೇಳಲಾಯಿತು. ಅದಕ್ಕೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳು ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಮತ್ತು ಇತ ವರಿಷ್ಠ ನಾಯಕರೊಂದಿಗೆ ಹಲವಾರು ಬಾರಿ ಚರ್ಚೆ ನಡೆದಿದೆ. ಮುಖ್ಯಮಂತ್ರಿಗಳು ಮತ್ತೊಂದು ಸಲ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ನಡ್ಡಾ ಅವರೊಂದಿಗೆ ಚರ್ಚೆ ನಡೆಸಿ ಇಷ್ಟರಲ್ಲೇ ತೀರ್ಮಾನ ತೆಗೆದುಕೊಳ್ಳುವ ನಿರೀಕ್ಷೆಯಿದೆ, ಎಲ್ಲರಿಗೂ ಈ ವಿಷಯದ ಬಗ್ಗೆ ಕುತೂಹಲವಿದೆ ಎಂದು ವಿಜಯೇಂದ್ರ ಹೇಳಿದರು.

ಇದನ್ನೂ ಓದಿ:   ವಿಜಯೇಂದ್ರ ಮತ್ತು ಶಿವಕುಮಾರ ನಡುವಿನ ಆತ್ಮೀಯತೆ ಮುರಘಾ ಶ್ರೀಗಳ ಜನ್ಮದಿನಾಚರಣೆ ಸಂದರ್ಭದಲ್ಲಿ ಗೊತ್ತಾಯಿತು