ಬಾಲಕಿಗೆ 18 ವರ್ಷ ತುಂಬುವವರೆಗೆ ಮದುವೆ ಮಾಡುವುದಿಲ್ಲ ಅಂತ ಪೋಷಕರಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು: ಅಧಿಕಾರಿ

|

Updated on: May 10, 2024 | 7:12 PM

ಮುಚ್ಚಳಿಕೆ ಬರೆಸಿಕೊಳ್ಳುವಲ್ಲಿಗೆ ಇಲಾಖೆಯ ಜವಾಬ್ದಾರಿ ಮುಗಿಯಿತೇ? ಹೆಣ್ಣು ಮಗುವನ್ನು ತಮ್ಮ ವಶಕ್ಕೆ ತೆಗೆದುಕೊಂಡು ರಕ್ಷಣೆ ಕೊಡಬೇಕಿತ್ತಲ್ಲವೇ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಅಧಿಕಾರಿ, ಮುಚ್ಚಳಿಕೆ ಬರೆಸಿಕೊಂಡ ಮೇಲೆ ನಡೆದ ವಿದ್ಯಮಾನಗಳ ಬಗ್ಗೆ ವರದಿ ತರಿಸಿಕೊಂಡು ಉತ್ತರ ನೀಡುತ್ತೇನೆ ಎಂದರು.

ಮಡಿಕೇರಿ: ಸೋಮವಾರಪೇಟ್ ತಾಲ್ಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಹತ್ತನೇ ತರಗತಿ ಪಾಸಾಗಿದ್ದ (SSLC passed girl) ಬಾಲಕಿಯ ಹತ್ಯೆ ಪ್ರಕರಣಕ್ಕೆ ಮತ್ತೊಂದು ತಿರುವು ಕಂಡಿದೆ. ಬಾಲಕಿಯನ್ನ ಕೊಂದು ಆಕೆಯ ರುಂಡದೊಂದಿಗೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದ್ದ ಪ್ರಕಾಶ್ ಅಲಿಯಾಸ್ ಓಂಕಾರಪ್ಪನ (Omkarappa) ದೇಹ ಬಾಲಕಿಯ ಮನೆಯಿಂದ ಸುಮಾರು 3 ಕಿಮೀ ದೂರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಲಕಿಯನ್ನು ಕೊಂದು ಅವನು ಆತ್ಮಹತ್ಯೆ (died by suicide) ಮಾಡಿಕೊಂಡನೋ ಅಥವಾ ಬೇರೆ ಯಾರಾದರೂ ಇಬ್ಬರನ್ನು ಕೊಂದರೋ ಅನ್ನೋದು ತನಿಖೆಯ ನಂತರ ಪತ್ತೆಯಾಗಲಿದೆ. ಏತನ್ಮಧ್ಯೆ, ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು, ಮಕ್ಕಳ ಸಹಾಯವಾಣಿಗೆ ಬಾಲ್ಯ ವಿವಾಹದ ಬಗ್ಗೆ ಫೋನ್ ಕಾಲ್ ಬಂದಾಗ ಪ್ರೊಟೊಕಾಲ್ ಪ್ರಕಾರ ಇಲಾಖೆಯ ಒಂದು ತಂಡ ಅಲ್ಲಿಗೆ ತೆರಳಿ ಬಾಲಕಿಗೆ 18 ವರ್ಷ ಪೂರ್ತಿಯಾಗುವವರೆಗೆ ಮದುವೆ ಮಾಡುವಂತಿಲ್ಲ ಅಂತ ಮುಚ್ಚಳಿಕೆ ಬರೆಸಿಕೊಂಡು ಬಂದಿದ್ದಾರೆ ಎಂದು ಹೇಳಿದರು. ಮುಚ್ಚಳಿಕೆ ಬರೆಸಿಕೊಳ್ಳುವಲ್ಲಿಗೆ ಇಲಾಖೆಯ ಜವಾಬ್ದಾರಿ ಮುಗಿಯಿತೇ? ಹೆಣ್ಣು ಮಗುವನ್ನು ತಮ್ಮ ವಶಕ್ಕೆ ತೆಗೆದುಕೊಂಡು ರಕ್ಷಣೆ ಕೊಡಬೇಕಿತ್ತಲ್ಲವೇ ಅಂತ ಕೇಳಿದ ಪ್ರಶ್ನೆಗೆ ಉತ್ತರಿಸಲು ತಡವರಿಸಿದ ಅಧಿಕಾರಿ, ಮುಚ್ಚಳಿಕೆ ಬರೆಸಿಕೊಂಡ ಮೇಲೆ ನಡೆದ ವಿದ್ಯಮಾನಗಳ ಬಗ್ಗೆ ವರದಿ ತರಿಸಿಕೊಂಡು ಉತ್ತರ ನೀಡುತ್ತೇನೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  SSLC ವಿಧ್ಯಾರ್ಥಿನಿ ಮೀನಾ ಕೊಲೆಗಡುಕ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ

Published on: May 10, 2024 06:42 PM